ಕರ್ನಾಟಕ

karnataka

ETV Bharat / international

ಕೋವಿಡ್ ದಿಢೀರ್‌ ಹೆಚ್ಚಳ: ಚೀನಾದ ಎರಡು ನಗರಗಳು ಲಾಕ್‌ಡೌನ್

1.8 ಲಕ್ಷ ಜನರಿರುವ ಚೀನಾದ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಅಲ್ಕ್ಸಾ ಲೆಫ್ಟ್ ಬ್ಯಾನರ್​​ ಹಾಗೂ 40 ಲಕ್ಷ ಜನರಿರುವ ಗನ್ಸು ಪ್ರಾಂತ್ಯದ ರಾಜಧಾನಿಯಾಗಿರುವ ಲಂಜೌ ನಗರದಲ್ಲಿ ಲಾಕ್​ಡೌನ್​ ವಿಧಿಸಲಾಗಿದೆ.

ಚೀನಾದಲ್ಲಿ ಏಕಾಏಕಿ ಕೋವಿಡ್ ಹೆಚ್ಚಳ
ಚೀನಾದಲ್ಲಿ ಏಕಾಏಕಿ ಕೋವಿಡ್ ಹೆಚ್ಚಳ

By

Published : Oct 26, 2021, 12:25 PM IST

Updated : Oct 26, 2021, 3:35 PM IST

ಬೀಜಿಂಗ್​: ಚೀನಾ ಹಾಗೂ ರಷ್ಯಾ ಗಡಿ ಭಾಗವಾದ ಮಂಗೋಲಿಯಾ ಹಾಗೂ ಚೀನಾದ ಗನ್ಸು ಪ್ರಾಂತ್ಯದ ರಾಜಧಾನಿಯಾಗಿರುವ ಲಂಜೌ ನಗರದಲ್ಲಿ ಏಕಾಏಕಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು, ಲಾಕ್‌ಡೌನ್ ಜಾರಿಗೊಳಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಳೆದ ವಾರದಲ್ಲಿ ಚೀನಾದಲ್ಲಿ ವರದಿಯಾದ 150ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳ ಪೈಕಿ ಉತ್ತರ ಚೀನಾಗೆ ಸೇರುವ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಅಲ್ಕ್ಸಾ ಲೆಫ್ಟ್ ಬ್ಯಾನರ್​​ನಲ್ಲೇ ಸುಮಾರು ಮೂರನೇ ಒಂದು ಭಾಗದಷ್ಟು ಕೇಸ್​ಗಳು ಪತ್ತೆಯಾಗಿವೆ. ಹೀಗಾಗಿ 1.8 ಲಕ್ಷ ಜನರಿರುವ ಈ ಪ್ರದೇಶದಲ್ಲಿ ಅಧಿಕಾರಿಗಳು ಲಾಕ್‌ಡೌನ್ ಹೇರಿದ್ದಾರೆ.

ಅಲ್ಕ್ಸಾ ಲೆಫ್ಟ್ ಬ್ಯಾನರ್‌ನ ಆಡಳಿತ ವಿಭಾಗವಾದ ಎಜಿನ್ ಬ್ಯಾನರ್‌ನ 35,700 ನಿವಾಸಿಗಳನ್ನು ತಮ್ಮ ಮನೆಯಲ್ಲೇ ಬಂಧಿಯಾಗುವಂತೆ ಸೂಚಿಸಲಾಗಿದೆ. ಎರೆನ್‌ಹೋಟ್ ನಗರದಲ್ಲಿಯೂ ಹೀಗೆ ಆದೇಶ ನೀಡಲಾಗಿದೆ. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಸಿವಿಲ್​ ಅಥವಾ ಅಪರಾಧ ಪ್ರಕರಣ ದಾಖಲಿಸುವುದಾಗಿ ಸ್ಥಳೀಯ ಸರ್ಕಾರ ಎಚ್ಚರಿಕೆ ನೀಡಿದೆ.

ಅಷ್ಟೇ ಅಲ್ಲ, ಚೀನಾದ ಸರ್ಕಾರಿ ಮಾಧ್ಯಮ ಗ್ಲೋಬಲ್​ ಟೈಮ್ಸ್​ ವರದಿ ಮಾಡಿರುವ ಪ್ರಕಾರ, ಪ್ರಸ್ತುತ ವೈರಸ್​ ಹರಡಲು ಅಸರ್ಮಪ ನಿರ್ವಹಣೆಯೇ ಕಾರಣ ಎಂದು ಆರೋಪಿಸಿ ಎಜಿನ್ ಬ್ಯಾನರ್‌ನ ಸ್ಥಳೀಯ ಆರೋಗ್ಯ ಆಯುಕ್ತರು ಸೇರಿದಂತೆ ಆರು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಕೋವಿಡ್​ ಉಲ್ಬಣ: ಜನರನ್ನು ಮನೆಯೊಳಗೇ ಲಾಕ್​ ಮಾಡುತ್ತಿರುವ ವಿಡಿಯೋ ನೋಡಿ

ಇತ್ತ ಲಂಜೌ ನಗರದಲ್ಲಿ 40 ಲಕ್ಷ ಜನರಿದ್ದು, ಕೊರೊನಾ ಉಲ್ಭಣಿಸಿದ ಬೆನ್ನಲ್ಲೇ ನಗರದಾದ್ಯಂತ ಸಂಪೂರ್ಣ ಲಾಕ್​ಡೌನ್​ ಹೇರಲಾಗಿದೆ. ಏಳು ದಿನಗಳ ಅವಧಿಯಲ್ಲಿ 11 ಪ್ರಾಂತ್ಯಗಳಿಗೆ ಕೋವಿಡ್ ಹರಡಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಬೀಜಿಂಗ್, ಗನ್ಸು, ನಿಂಗ್ಕ್ಸಿಯಾ ಮತ್ತು ಗುಯ್‌ಜೌ ಸೇರಿದಂತೆ ಚೀನಾದ ಕೆಲವು ಭಾಗಗಳಲ್ಲಿ ಪ್ರಯಾಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಆಯ್ದ ಪ್ರಾಂತ್ಯಗಳಲ್ಲಿ ಎಲ್ಲಾ ರೈಲು ಸೇವೆಗಳು ಮತ್ತು ಪ್ರವಾಸಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷದ ಆಗಸ್ಟ್‌ನಲ್ಲಿ, ಚೀನಾ ಸರ್ಕಾರವು 2 ಬಿಲಿಯನ್ ಡೋಸ್ ಕೋವಿಡ್ -19 ಲಸಿಕೆಗಳನ್ನು ನೀಡಿರುವುದಾಗಿ ಹೇಳಿಕೊಂಡಿತ್ತು. ಅಲ್ಲಿನ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2019ರ ಡಿಸೆಂಬರ್​ನಿಂದ ಈವರೆಗೆ 96,836 ಜನರಿಗೆ ಸೋಂಕು ತಗುಲಿದ್ದು, 4,636 ಮಂದಿ ಬಲಿಯಾಗಿದ್ದಾರೆ. ಈ ಹಿಂದೆ ಆಗಸ್ಟ್​ನಲ್ಲಿ ಕೂಡ ಕೋವಿಡ್ ಡೆಲ್ಟಾ ರೂಪಾಂತರವು ಚೀನದಾದ್ಯಂತ ಉಲ್ಬಣಗೊಳ್ಳುತ್ತಿದೆ ಎಂದು ಅಧಿಕಾರಿಗಳು ಜನರನ್ನು ಅವರವರ ಮನೆಯೊಳಗೆ ಕೂಡಿ ಹಾಕುತ್ತಿರುವ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

Last Updated : Oct 26, 2021, 3:35 PM IST

ABOUT THE AUTHOR

...view details