ಬೊನ್ನ್ (Bonn) (ಜರ್ಮನಿ): ಚೀನಾದಲ್ಲಿರುವ ತನ್ನ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಯನ್ನ ಜಾಗತಿಕವಾಗಿ ಖಂಡಿಸಿದ್ದರೂ ಉಯಿಗುರ್ ಮುಸ್ಲಿಂ ಸಮುದಾಯದ ವಿಚಾರದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಚೀನಾ ವಿರುದ್ಧ ಮಾತನಾಡದೆ ಅವರು ನಮ್ಮ ಉತ್ತಮ ಸ್ನೇಹಿತರು ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಇಮ್ರಾನ್ ಖಾನ್, ಕಾಶ್ಮೀರದ ವಿಚಾರದ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಅಲ್ಲದೆ ಉಯಿಗುರ್ ಸಮುದಾಯದ ವಿಚಾರ ಕೂಡ ಸೂಕ್ಷ್ಮವಾಗಿದ್ದು, ಅದಕ್ಕಾಗಿಯೇ ಪಾಕಿಸ್ತಾನ ಮಾತನಾಡುತ್ತಿಲ್ಲ ಎಂದಿದ್ದಾರೆ.
ಕಾಶ್ಮೀರದ ವಿಚಾರ ಬಂದಾಗ ಟೀಕಿಸುವ ತಾವು ಉಯಿಗುರ್ ಸಮುದಾಯದ ವಿಚಾರದಲ್ಲಿ ಏಕೆ ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗೆ ಎರಡು ಕಾರಣ ನೀಡಿದ ಇಮ್ರಾನ್ ಖಾನ್, ಮೊದಲನೇಯದಾಗಿ ಭಾರತದಲ್ಲಿ ನಡೆಯುತ್ತಿರುವ ಘಟನೆ ಮತ್ತು ಚೀನಾದಲ್ಲಿನ ಉಯಿಗುರ್ ಸಮುದಾಯದ ವಿಚಾರ ಎರಡೂ ಹೋಲಿಕೆ ಮಾಡಬಹುದಾದ ವಿಚಾರಗಳಲ್ಲ. ಎರಡನೇಯದು, ಚೀನಾ ಪಾಕಿಸ್ತಾನದ ಉತ್ತಮ ಸ್ನೇಹಿತ. ಆರ್ಥಿಕ ವಿಪತ್ತಿನಂತಹ ಸಮಯದಲ್ಲಿ ನಮಗೆ ಸಹಾಯ ಮಾಡಿದೆ. ಹೀಗಾಗಿ ಉಯಿಗುರ್ ಸಮುದಾಯದ ವಿವಾದದ ಬಗ್ಗೆ ನಾವು ಖಾಸಗಿಯಾಗಿ ಚರ್ಚೆ ಮಾಡುತ್ತೇವೆ, ಸಾರ್ವಜನಿಕವಾಗಿ ಅಲ್ಲ ಎಂದಿದ್ದಾರೆ.
ತಮ್ಮ ದೇಶಗಳಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರನ್ನು ಹತ್ತಿಕ್ಕುತ್ತಿರುವ ಚೀನಾವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡಿಸಲಾಗಿದೆ. ಉಯಿಗುರ್ ಮುಸ್ಲಿಮರನ್ನು ಸಾಮೂಹಿಕ ಬಂಧನ ಶಿಬಿರಗಳಿಗೆ ಕಳುಹಿಸುವ ಮೂಲಕ, ಅವರ ಧಾರ್ಮಿಕ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಕೆಲವು ರೀತಿಯ ಬಲವಂತದ ಮರು ಶಿಕ್ಷಣ ಅಥವಾ ಉಪದೇಶಕ್ಕೆ ಒಳಪಡಿಸುವ ಮೂಲಕ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂಬ ಆರೋಪ ಚೀನಾ ಮೇಲಿದೆ. ಆದರೂ, ಈ ವಿಷಯದ ಬಗ್ಗೆ ಪಾಕಿಸ್ತಾನ ಮೌನ ವಹಿಸಿದೆ.
ಆದರೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದಾಗ ಭಾರತ ಸರ್ಕಾರದ ವಿರುದ್ಧ ಪಾಕ್ ಗುಡುಗಿತ್ತು. ಆ ಭಾಗದ ಮುಸ್ಲಿಂ ಸಮುದಾಯದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.