ಟೋಕಿಯೋ(ಜಪಾನ್): ಜುಲೈ 23ರಿಂದ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಗೆದ್ದವರಿಗೆ ಪದಕ ವಿತರಣೆ ವೇಳೆ ಸ್ಪರ್ಧಿಗಳು, ಮೆಡಲ್ ನೀಡುವವರು, ಸ್ವಯಂಸೇವಕರು ಮತ್ತು ಇತರರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕೋವಿಡ್ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿಗಳ ಬಿಡುಗಡೆ ಮಾಡಲಾಗಿದ್ದು, ಯಾರೂ ಕೂಡಾ ಪದಕ ವಿತರಣೆ ವೇಳೆ ಗುಂಪು ಗುಂಪಾಗಿ ಫೋಟೋ ತೆಗೆಸಿಕೊಳ್ಳಬಾರದು, ಪೋಡಿಯಂನ ಬಳಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂದು ಸೂಚನೆ ನೀಡಿದೆ.
ಈ ಮೊದಲೇ ಜೂನ್ನಲ್ಲಿ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಸ್ಪರ್ಧಿಗಳು ಮತ್ತು ಮೆಡಲ್ ನೀಡುವವರು ಮಾಸ್ಕ್ಗಳನ್ನು ಧರಿಸುವುದು ಕಡ್ಡಾಯ ಎಂದು ಹೇಳಿತ್ತು. ಈಗ ಅದೇ ನಿಯಮವನ್ನು ಮತ್ತೊಮ್ಮೆ ಕೋವಿಡ್ ಮಾರ್ಗಸೂಚಿಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸೂಚಿಸಿದೆ.
ಇದರ ಜೊತೆಗೆ ಚಿನ್ನ, ಬೆಳ್ಳಿ, ಕಂಚಿನ ಪದಕ ಗಳಿಸುವ ಸ್ಪರ್ಧಿಗಳ ಪದಕ ಸ್ವೀಕರಿಸುವ ಪೋಡಿಯಂಗಳನ್ನು ಕೂಡಾ ಸಾಕಷ್ಟು ದೂರದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಇಡಲಾಗುತ್ತದೆ ಎಂದು ಐಒಸಿ ತಿಳಿಸಿದೆ.