ನವದೆಹಲಿ: ಮುಂದಿನ ಎರಡು ಮೂರು ತಿಂಗಳು ಅಫ್ಘಾನಿಸ್ತಾನದಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳು ದೇಶದ ಮುಂದಿನ ಭವಿಷ್ಯ ನಿರ್ಣಯಿಸುತ್ತವೆ. ಈ ಹಿನ್ನೆಲೆ ಪ್ರಸ್ತುತ ಆಡಳಿತ ವ್ಯವಸ್ಥೆ ಮುಂದುವರಿಸುವುದು ಅನಿವಾರ್ಯ ಎಂದು ಭಾರತ ತಿಳಿಸಿದೆ.
ಆಫ್ಘನ್ ಮೇಲೆ ತಾಲಿಬಾನ್ ತನ್ನ ಆಕ್ರಮಣ ಮುಂದುವರಿಸುತ್ತಿದ್ದಂತೆ, ಪಾಕಿಸ್ತಾನ ಉಗ್ರರಿಗೆ ನೆರವಾಗುತ್ತಿದೆ. ಗಾಯಗೊಂಡ ಉಗ್ರರಿಗೆ ಪಾಕ್ ವೈದ್ಯಕೀಯ ಸೌಲಭ್ಯ ನೀಡುತ್ತಿದೆ ಎನ್ನಲಾಗಿದೆ. ಆಗಸ್ಟ್ 31 ರೊಳಗೆ ಆಫ್ಘನ್ನಿಂದ ಅಮೆರಿಕ ತನ್ನ ಸೈನ್ಯ ಸಂಪೂರ್ಣ ಹಿಂತೆಗೆದುಕೊಂಡರೆ ತಾಲಿಬಾನ್ ಅಟ್ಟಹಾಸ ಮತ್ತಷ್ಟು ಹೆಚ್ಚಾಗಬಹುದು ಎಂದು ಭಾರತ ಅಭಿಪ್ರಾಯಪಟ್ಟಿದೆ.
ಅಫ್ಘಾನಿಸ್ತಾನವು ತನ್ನ ಭದ್ರತಾ ಪಡೆಯಿಂದ ದೇಶ ರಕ್ಷಿಸಿಕೊಳ್ಳುವಲ್ಲಿ ಸಮರ್ಥವಾಗಿದೆ ಎಂದು ಭಾರತ ಮತ್ತು ಹಲವಾರು ಮಿತ್ರ ರಾಷ್ಟ್ರಗಳು ವಿಶ್ವಾಸ ವ್ಯಕ್ತಪಡಿಸಿವೆ. ಕಾಬೂಲ್ ಸರ್ಕಾರವನ್ನು ಬೆಂಬಲಿಸಿರುವ ಮೋದಿ ಸರ್ಕಾರ ಯಾವ ರೀತಿಯ ಸಹಾಯ ಬೇಕಾದರೂ ಮಾಡಲು ಸಿದ್ಧ ಎಂದಿದೆ.
ಮೇ 1 ರಿಂದ ಅಮೆರಿಕ ತನ್ನ ಭದ್ರತಾ ಪಡೆಗಳನ್ನು ಹಿಂತೆಗೆದುಕೊಳ್ಳಲು ಪ್ರಾರಂಭಿಸಿದ ಬಳಿಕ ಆಫ್ಘನ್ನಲ್ಲಿ ತಾಲಿಬಾನ್ ಸರಣಿ ಸ್ಫೋಟಗಳನ್ನು ನಡೆಸಿ, ಹಿಂಸಾಚಾರ ಸೃಷ್ಟಿಸಿದೆ. ಹಲವಾರು ಪ್ರದೇಶಗಳ ಗಡಿ ದಾಟಿದ್ದು, ಗ್ರಾಮೀಣ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದೆ.