ನವದೆಹಲಿ / ನಾಯ್‌ಪಿಡಾವ್: ಮ್ಯಾನ್ಮಾರ್‌ನಲ್ಲಿ ಉಂಟಾಗಿರುವ ಹಠಾತ್ ಮಿಲಿಟರಿ ದಂಗೆಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ದೇಶದ ಆಡಳಿತವನ್ನು ತೆಕ್ಕೆಗೆ ಪಡೆದಿರುವ ಮಿಲಿಟರಿ ಒಂದು ವರ್ಷದ ತುರ್ತುಪರಿಸ್ಥಿತಿ ಘೋಷಿಸಿರುವ ಬೆಳವಣಿಗೆಗಳ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದ್ದು, ಕಾನೂನು ಹಾಗೂ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಎತ್ತಿ ಹಿಡಿಯುವಂತೆ ಒತ್ತಾಯಿಸಿದೆ.
ಈ ಕುರಿತು ನವದೆಹಲಿಯ ವಿದೇಶಾಂಗ ಸಚಿವಾಲಯ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಪರಿವರ್ತನೆಯ ಪ್ರಕ್ರಿಯೆಗೆ ಭಾರತ ಯಾವಾಗಲೂ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದೆ.
ರಾಜ್ಯ ಕೌನ್ಸಿಲರ್ ಆಂಗ್ ಸಾನ್ ಸೂಕಿ ಅವರ ಆಡಳಿತಾರೂಢ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷವು ನವೆಂಬರ್ 8, 2020 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನಿಚ್ಚಳ ಗೆಲುವು ಸಾಧಿಸಿದ ಕೇವಲ ಎರಡು ತಿಂಗಳ ನಂತರ ಸೋಮವಾರದ ಮಿಲಿಟರಿ ದಂಗೆ ಸಂಭವಿಸಿದೆ.
ಆಂಗ್ ಸಾನ್ ಸೂಕಿ ಅವರ ಎನ್‌ಎಲ್‌ಡಿ ಪಾರ್ಟಿ ಚುನಾವಣೆಗಳಲ್ಲಿ 322ಕ್ಕೂ ಹೆಚ್ಚು ಸ್ಥಾನ ಪಡೆದು ಬಹುಮತ ಪಡೆದಿತ್ತು. ಆದರೆ ಮ್ಯಾನ್ಮಾರ್‌ನ ಮಿಲಿಟರಿ ಬೆಂಬಲಿತ ಪ್ರತಿಪಕ್ಷ ಯೂನಿಯನ್ ಸಾಲಿಡಾರಿಟಿ ಅಂಡ್ ಡೆವಲಪ್‌ಮೆಂಟ್ ಪಾರ್ಟಿ (ಯುಎಸ್‌ಡಿಪಿ) ಈ ಚುನಾವಣಾ ಫಲಿತಾಂಶಗಳನ್ನು ನಿರಾಕರಿಸಿತ್ತು.
2011ರಲ್ಲಿ ದೇಶದಲ್ಲಿ ಮಿಲಿಟರಿ ಆಡಳಿತ ಕೊನೆಗೊಂಡ ನಂತರ ಇದು ಎರಡನೇ ಸಾರ್ವತ್ರಿಕ ಚುನಾವಣೆಯಾಗಿದೆ. ಚುನಾವಣೆಗಳಲ್ಲಿ ವಂಚನೆ ನಡೆದಿದ್ದು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ತಾನೇ ಮುಂದಾಗಿ ಕ್ರಮ ಕೈಗೊಳ್ಳುವುದಾಗಿ ಮಿಲಿಟರಿ ಎಚ್ಚರಿಕೆ ನೀಡಿತ್ತು. ಅಲ್ಲದೇ ಸಂಭವನೀಯ ಮಿಲಿಟರಿ ಬಂಡಾಯ ನಡೆಸುವುದಾಗಿ ಕೂಡ ಹೇಳಿತ್ತು.