ಇಸ್ಲಾಮಾಬಾದ್(ಪಾಕಿಸ್ತಾನ):ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳ ಮಂಡಿಸಿರುವ ಅವಿಶ್ವಾಸ ನಿರ್ಣಯವು ಮಾರ್ಚ್ 28ರಂದು ಸಂಸತ್ತಿನ ಮುಂದೆ ಬರುವ ಸಾಧ್ಯತೆಯಿದೆ. ಇಮ್ರಾನ್ ಖಾನ್ ಮಾರ್ಚ್ 27 ರಂದು ಪ್ರಮುಖ ವಿಷಯವನ್ನು ಘೋಷಿಸಬಹುದು ಎಂದು ಪಾಕ್ ಆಂತರಿಕ ಸಚಿವ ಶೇಖ್ ರಶೀದ್ ಬುಧವಾರ ಹೇಳಿದ್ದಾರೆ ಎಂದು ಸಾಮಾ ಟಿವಿ ವರದಿ ಮಾಡಿದೆ.
ಸ್ಪೀಕರ್ ಅವರು ಇಮ್ರಾನ್ ಖಾನ್ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯದ ಮೇಲೆ ಯಾವಾಗ ಬೇಕಾದರೂ ಮತದಾನ ನಡೆಸಬಹುದೆಂದೂ ಅವರು ತಿಳಿಸಿದರು. ಸಂಸತ್ ಸಭೆಯು ಮಾರ್ಚ್ 25 ರಂದು ನಡೆಯಲಿದೆ. ಆದರೆ, ಸಂಪ್ರದಾಯದ ಪ್ರಕಾರ 'ಫತೇ'(Fateh) ನಂತರ ಅಧಿವೇಶನವನ್ನು ಒಂದು ದಿನಕ್ಕೆ ಮುಂದೂಡಲಾಗುವುದು. ಹಾಗೆಯೇ ಸ್ಪೀಕರ್ ನಿರ್ಧಾರಕ್ಕನುಗುಣವಾಗಿ ಮಾರ್ಚ್ 31 ಅಥವಾ ಏಪ್ರಿಲ್ 1 ರಂದು ಮತದಾನ ನಡೆಸಬಹುದು ಎಂದು ರಶೀದ್ ಮಾಹಿತಿ ನೀಡಿದರು..
ಬುಧವಾರ ಇಮ್ರಾನ್ ಖಾನ್ ಪಿಎಂ ಹೌಸ್‌ನಲ್ಲಿ ರಾಜಕೀಯ ಸಮಿತಿ ಸಭೆ ನಡೆಸಿದ್ದು, ರಶೀದ್ ಸೇರಿ ವಾರ್ತಾ ಸಚಿವ ಫವಾದ್ ಚೌಧರಿ ಮತ್ತು ಇತರ ಕೇಂದ್ರ ಸಚಿವರು ಉಪಸ್ಥಿತರಿದ್ದರು. ಪ್ರಮುಖವಾಗಿ ಕಾನೂನು ಮತ್ತು ಸಾಂವಿಧಾನಿಕ ವಿಷಯಗಳ ಕುರಿತು ಅವರು ವಿವರಣೆ ನೀಡಿದರು. ಸಭೆಯಲ್ಲಿ ದೇಶದ ರಾಜಕೀಯ ಪರಿಸ್ಥಿತಿ ಹಾಗೂ ಅವಿಶ್ವಾಸ ನಿರ್ಣಯದ ಕುರಿತು ಚರ್ಚೆ ನಡೆಸಲಾಯಿತು. ಮಾರ್ಚ್ 27 ರಂದು ನಿಗದಿಯಾಗಿರುವ ಪಿಟಿಐ ರ್ಯಾಲಿಯ ಸಿದ್ಧತೆ ಬಗ್ಗೆ ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು.
ಇದನ್ನೂ ಓದಿ:ಭಾರತದ ವಿದೇಶಾಂಗ ನೀತಿಯನ್ನು ಹಾಡಿ ಹೊಗಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್!
ಇನ್ನೂ ಸಭೆಯ ನಂತರ ಹಿರಿಯ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಧಾನಿ ಇಮ್ರಾನ್ ಖಾನ್, ಅವಿಶ್ವಾಸ ನಿರ್ಣಯದ ಮೇಲಿನ ಮತದಾನದ ಒಂದು ದಿನ ಮೊದಲು ಅಥವಾ ಆ ದಿನದಂದೇ ಆಶ್ಚರ್ಯಕರ ವಿಷಯ ಬಹಿರಂಗಗೊಳ್ಳಲಿದೆ ಎಂದು ಹೇಳಿದರು. ವಿಪಕ್ಷ ನಾಯಕರು ತಮ್ಮೊಂದಿಗೆ ಎಷ್ಟು ಕಡಿಮೆ ಸದಸ್ಯರು ಉಳಿಯುತ್ತಾರೆ ಎಂಬುದನ್ನು ಊಹಿಸಲು ಕೂಡ ಸಾಧ್ಯವಿಲ್ಲ ಎಂದು ಇದೇ ವೇಳೆ ಆಶ್ಚರ್ಯಕರ ಹೇಳಿಕೆಯನ್ನೂ ನೀಡಿದರು.