ರಿಯಾದ್ (ಸೌದಿ ಅರೇಬಿಯಾ):ವಾರ್ಷಿಕ ಹಜ್ ಯಾತ್ರೆಯ ಸಂದರ್ಭದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸೌದಿ ಅರೇಬಿಯಾ ಪವಿತ್ರ ಹಜ್ ಯಾತ್ರೆಗೆ ನಿರ್ಬಂಧ ವಿಧಿಸಿತ್ತು. ಈಗ ಮತ್ತೆ ಪ್ರಾರಂಭಿಸಲು ತಯಾರಿ ನಡೆಸಿದೆ.
ಸೌದಿ ಅರೇಬಿಯಾದ ಕೇವಲ 1,000 ಜನಕ್ಕೆ ಮಾತ್ರ ಪಾಲ್ಗೊಳ್ಳಲು ಅವಕಾಶವಿರುತ್ತದೆ. ಇಸ್ಲಾಂನ ಅತ್ಯಂತ ಪವಿತ್ರ ಸ್ಮಾರಕ ಕಾಬಾವನ್ನು ಮುಟ್ಟಲು ಅವಕಾಶ ಇರುವುದಿಲ್ಲ. ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿ ಇರ ಲಿದೆ ಎಂದು ಈ ಹಿಂದೆ ಸೌದಿ ಅರೇಬಿಯಾ ಪ್ರಕಟಣೆಯಲ್ಲಿ ತಿಳಿಸಿತ್ತು.
ಇನ್ನು ಜುಲೈ 29ರಿಂದ ಹಜ್ ಯಾತ್ರೆ ಆರಂಭಗೊಳ್ಳಲಿದೆ. ಕೋವಿಡ್ ಲಕ್ಷಣ ಮತ್ತು 65 ವರ್ಷದ ಮೇಲಿನವರಿಗೆ ಹಜ್ ಯಾತ್ರೆ ನಿರ್ಬಂಧವಿದ್ದು, ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಲು ಆಡಳಿತ ಮಂಡಳಿ ಸೂಚಿಸಿದೆ.
ವಾರ್ಷಿಕ ಸಭೆಗಾಗಿ ಈ ಜುಲೈ ಮತ್ತು ಅಗಸ್ಟ್‌ನಲ್ಲಿ ಸುಮಾರು ಎರಡು ಮಿಲಿಯನ್ ಜನರು ಮೆಕ್ಕಾ ಮತ್ತು ಮದೀನಾಕ್ಕೆ ಪ್ರಯಾಣಿಸುವ ನಿರೀಕ್ಷೆಯಿತ್ತು. ಆದರೆ, ಸೌದಿ ನಿವಾಸಿಗಳಿಗೆ ಮಾತ್ರ ಈ ವರ್ಷ ಹಾಜರಾಗಲು ಅವಕಾಶವಿರುತ್ತದೆ. ಸೌದಿ ಅರೇಬಿಯಾದಲ್ಲಿ ಒಟ್ಟು 2,53,349 ಕೋವಿಡ್-19 ಪ್ರಕರಣ ವರದಿಯಾಗಿದ್ದು, 2,523 ಸೋಂಕಿತರು ಮೃತಪಟ್ಟಿದ್ದಾರೆ.