ಕಾಬೂಲ್ (ಅಫ್ಘಾನಿಸ್ತಾನ್):ಆಫ್ಘನ್ನಲ್ಲಿ ತಾಲಿಬಾನಿಗಳು ಹಿಂಸಾತ್ಮಕ ಕೃತ್ಯ ಎಸಗುತ್ತಿರುವುದು ಒಂದೆಡೆಯಾದರೆ. ಆಂತರಿಕವಾಗಿ ಸರ್ಕಾರ ರಚನೆಯ ಕಚ್ಚಾಟಗಳು ಹೆಚ್ಚಾಗುತ್ತಿವೆ. ತಾಲಿಬಾನ್ ನಾಯಕತ್ವದ ಸರ್ಕಾರ ರಚನೆಯಲ್ಲಿ ವಾಸ್ತವವಾದಿಗಳು ಮತ್ತು ವಿಚಾರವಾದಿಗಳ ನಡುವಿನ ವೈಷಮ್ಯ ಇದೀಗ ಮತ್ತಷ್ಟು ಉಲ್ಬಣಗೊಂಡಿದೆ. ಈ ನಡುವೆ ಸಂಪುಟ ರಚನೆಯಾದ ಹಿನ್ನೆಲೆ ಅಧಿಕಾರಕ್ಕಾಗಿ ಈ ಎರಡು ವರ್ಗಗಳಲ್ಲಿ ಒಳ ಸಂಘರ್ಷ ಏರ್ಪಟ್ಟಿದೆ.
ಸಂಪುಟದಲ್ಲಿ ಸ್ಥಾನಗಿಟ್ಟಿಸುವ ಹಂಬಲದಿಂದ ಎರಡು ಗುಂಪುಗಳ ನಡುವಿನ ಘರ್ಷಣೆ ಹಿಂಸಾಚಾರಕ್ಕೆ ತಿರುಗಿದೆ ಎನ್ನಲಾಗ್ತಿದೆ. ಈ ಗಲಾಟೆಯಲ್ಲಿ ತಾಲಿಬಾನ್ ಸಹ - ಸಂಸ್ಥಾಪಕ ಹಾಗೂ ಅಲ್ಲಿನ ಉಪ ಪ್ರಧಾನಿಯಾಗಿರುವ ಅಬ್ದುಲ್ ಘನಿ ಬರದಾರ್ ಸಾವನ್ನಪ್ಪಿದ್ದಾರೆಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ಆದರೆ, ಈ ವದಂತಿಯನ್ನ ಖುದ್ದು ಬರದಾರ್ ಅವರೇ ತಮ್ಮ ಕೈ ಬರಹದ ಮೂಲಕ ಮತ್ತು ಆಡಿಯೋ ಸಂದೇಶ ಕಳುಹಿಸುವ ಮೂಲಕ ಅಲ್ಲಗಳೆದಿದ್ದರು. ತಾಲಬಾನ್ ಮತ್ತು ಅಮೆರಿಕ ನಡುವಿನ ಮಾತುಕತೆಯ ಸಮಯದಲ್ಲಿ ಮುಖ್ಯ ಸಂಧಾನಕಾರರಾಗಿ ನೇಮಕವಾಗಿದ್ದ ಬರದಾರ್ ಅವರ ಕಚೇರಿಯಿಂದ ಪಾಷ್ಟೋ ಭಾಷೆಯ ಪತ್ರ ಪ್ರಕಟಿಸಲಾಗಿತ್ತು.