ಢಾಕಾ(ಬಾಂಗ್ಲಾದೇಶ):ಬಹಳ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ವರ್ಷಧಾರೆಗೆ ದಕ್ಷಿಣ ಬಾಂಗ್ಲಾದೇಶದ ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳು ಜಲಾವೃತಗೊಂಡಿವೆ.
ಬುಧವಾರದ ಮಳೆಗೆ ಕೇವಲ 24 ಗಂಟೆಗಳಲ್ಲಿ, ಕಾಕ್ಸ್ ಬಜಾರ್ ಜಿಲ್ಲೆಯ ಶಿಬಿದಲ್ಲಿ 30 ಸೆಂಟಿಮೀಟರ್ ಮಳೆ ಬಿದ್ದಿದೆ. ಮುಂದಿನ ಕೆಲವು ದಿನಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ. ಕೊರೊನಾ ಸಾಂಕ್ರಾಮಿಕದಿಂದ ಪರಿಸ್ಥಿತಿ ಮತ್ತಷ್ಟು ಕಠಿಣವಾಗಿದೆ. ಈ ವಾರದ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಐದು ಮಂದಿ ಮತ್ತು ಪ್ರವಾಹದ ನೀರಿನಿಂದ ಒಂದು ಮಗು ಸಾವಿಗೀಡಾಗಿದೆ.
ಆರಂಭಿಕ ವರದಿಗಳ ಪ್ರಕಾರ, 12,000 ಕ್ಕೂ ಹೆಚ್ಚು ನಿರಾಶ್ರಿತರು ಭಾರಿ ಮಳೆ ಪರಿಣಾಮ ಎದುರಿಸಿದ್ದಾರೆ ಮತ್ತು ಅಂದಾಜು 2,500 ಆಶ್ರಯಗಳು ಹಾನಿಗೀಡಾಗಿವೆ ಎಂದು ಹೇಳಲಾಗಿದೆ. 5,000ಕ್ಕೂ ಹೆಚ್ಚು ನಿರಾಶ್ರಿತರನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಲಾಗದೆ.