ಬರ್ಮಾ: ತಪ್ಪು ಮಾಹಿತಿ ಹರಡುವುದನ್ನು ತಡೆಯುವ ದೃಷ್ಟಿಯಿಂದ ಮ್ಯಾನ್ಮಾರ್ ಮಿಲಿಟರಿ ಪಡೆಯ ಪೋಸ್ಟ್ಗಳು ಹಾಗೂ ಪ್ರೊಫೈಲ್ಗಳ ಮೇಲೆ ಫೇಸ್‌ಬುಕ್ ನಿರ್ಬಂಧ ಹೇರಿದೆ.
ಮ್ಯಾನ್ಮಾರ್ನಲ್ಲಿ ನಡೆಯುತ್ತಿರುವ ಮಿಲಿಟರಿ ದಂಗೆಯ ವಿರುದ್ಧ ಜನರ ಪ್ರತಿಭಟನೆಗಳು ಮುಂದುವರೆದಿದ್ದು, ಮತ್ತಷ್ಟು ಅಹಿತಕರ ಘಟನೆಗಳಿಗೆ ಫೇಸ್‌ಬುಕ್ ಪೋಸ್ಟ್ಗಳು ಎಡೆ ಮಾಡಿಕೊಡಬಾರದೆಂಬ ಕಾರಣಕ್ಕೆ ಕಡಿವಾಣ ಹಾಕಲಾಗಿದೆ. ಈ ನಿರ್ಬಂಧವು ಮ್ಯಾನ್ಮಾರ್ ಮಿಲಿಟರಿ ವಕ್ತಾರ ಬ್ರಿಗೇಡಿಯರ್-ಜನರಲ್ ಝಾ ಮಿನ್ ತುನ್‌ರ ಫೇಸ್‌ಬುಕ್ ಖಾತೆ ಸೇರಿದಂತೆ ಸೇನೆಯ ಇತರ ಅಧಿಕಾರಿಗಳ ಖಾತೆಗೆ ಅನ್ವಯಿಸುತ್ತವೆ.
ಇದನ್ನೂ ಓದಿ: ಮ್ಯಾನ್ಮಾರ್ ಸೇನೆ ಶೀಘ್ರ ಸಂಸತ್ ಸಭೆ ನಡೆಸಲಿ; ಅಮೆರಿಕ ಸೂಚನೆ
2020ರ ನವೆಂಬರ್ 8 ರಂದು ಹೊರಬಂದ ಸಂಸತ್ ಚುನಾವಣಾ ಫಲಿತಾಂಶ ಮ್ಯಾನ್ಮಾರ್ ಅನ್ನು ನಡುಗಿಸಿದೆ. ಚುನಾವಣೆಯಲ್ಲಿ ಮಾಜಿ ಆಡಳಿತ ಪಕ್ಷವಾದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಶೇ.80 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ. ಅಂದಿನಿಂದ ಮ್ಯಾನ್ಮಾರ್ನಲ್ಲಿ ಸರ್ಕಾರ ಮತ್ತು ಮಿಲಿಟರಿ ಆಡಳಿತದ ನಡುವೆ ಸಂಘರ್ಷ ನಡೆಯುತ್ತಿದೆ.
ಮ್ಯಾನ್ಮಾರ್‌ನ ಆಡಳಿತಾರೂಢ ಪಕ್ಷದ ಕೌನ್ಸಿಲರ್ ಆಂಗ್ ಸಾನ್ ಸೂಕಿ ಸೇರಿದಂತೆ ಹಲವು ನಾಯಕರನ್ನು ಅಲ್ಲಿನ ಸೇನೆಯು ವಶಕ್ಕೆ ಪಡೆದು ಗೃಹಬಂಧನದಲ್ಲಿರಿಸಿದೆ. ಫೇಸ್‌ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಂಗೆ ನಿರ್ಬಂಧ ಹೇರಿದೆ. ಅಲ್ಲದೇ ದೇಶದಲ್ಲಿ ಒಂದು ವರ್ಷಗಳ ಕಾಲ ತುರ್ತು ಪರಿಸ್ಥಿತಿ ಕೂಡ ಘೋಷಣೆ ಮಾಡಲಾಗಿದೆ.