ತೈಪೈ(ತೈವಾನ್):ಚೀನಾ ತನ್ನ ನೆರೆಯ ರಾಷ್ಟ್ರ ತೈವಾನ್ ವಿರುದ್ಧ ಬಲ ಪ್ರದರ್ಶನವನ್ನು ಮುಂದುವರಿಸಿದ್ದು, ಶನಿವಾರ ತೈವಾನ್ ಕಡೆಗೆ ಸುಮಾರು 30ಕ್ಕೂ ಹೆಚ್ಚು ಮಿಲಿಟರಿ ವಿಮಾನಗಳನ್ನು ಹಾರಿಸಿದೆ. ಇದು ಎರಡನೇ ಅತ್ಯಂತ ದೊಡ್ಡ ಬಲ ಪ್ರದರ್ಶನ ಎಂದು ಹೇಳಲಾಗುತ್ತಿದೆ.
ತೈವಾನ್‌ನ ರಕ್ಷಣಾ ಸಚಿವಾಲಯವು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 39 ವಿಮಾನಗಳು ತೈವಾನ್‌ನ ವಾಯು ರಕ್ಷಣಾ ವಲಯವನ್ನು ಎರಡು ತಂಡಗಳಲ್ಲಿ ಪ್ರವೇಶಿಸಿವೆ. ಒಂದು ತಂಡ ಹಗಲಿನ ವೇಳೆ ತೈವಾನ್ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿದರೆ, ಮತ್ತೊಂದು ತಂಡ ರಾತ್ರಿ ವೇಳೆ ಪ್ರವೇಶಿಸಿದೆ ಎಂದಿದ್ದಾರೆ. ಶುಕ್ರವಾರ ಇದೇ ರೀತಿಯಲ್ಲಿ 38 ವಿಮಾನಗಳು ತೈವಾನ್ ಕಡೆಗೆ ಹಾರಿ ಬಂದಿದ್ದವು ಎಂದು ತೈವಾನ್‌ನ ರಕ್ಷಣಾ ಸಚಿವಾಲಯ ಹೇಳಿದೆ.
ತೈವಾನ್‌ನ ಪ್ರಧಾನಮಂತ್ರಿ ಸು ತ್ಸೆಂಗ್-ಚಾಂಗ್ ಚೀನಾದ ಈ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾದೇಶಿಕ ಶಾಂತಿಗೆ ಧಕ್ಕೆ ತರಲು ಚೀನಾ ಯಾವಾಗಲೂ ಇಂಥಹ ಕ್ರೂರ ಮತ್ತು ಅನಾಗರಿಕ ನಡೆ ಪ್ರದರ್ಶಿಸುತ್ತದೆ ಎಂದು ಹರಿಹಾಯ್ದಿದ್ದಾರೆ.