ಕಾಬೂಲ್: ಅಘ್ಘಾನಿಸ್ತಾನದಲ್ಲಿ ಕ್ಷಣದಿಂದ ಕ್ಷಣಕ್ಕೆ ಪರಿಸ್ಥಿತಿ ಹದಗೆಡುತ್ತಿದ್ದು, ತಾಲಿಬಾನ್ನಗಳ ಅಟ್ಟಹಾಸಕ್ಕೆ ಕಾಬೂಲ್ ಅಕ್ಷರಶಃ ನರಕದಂತಾಗಿದೆ. ತಾಲಿಬಾನ್ ಪಡೆಗೆ ಹೆದರಿ ಜನರು ಊರುಗಳನ್ನು ತೊರೆಯುತ್ತಿದ್ದು ಬಸ್ಗಳನ್ನು ಏರಿದಂತೆ, ವಿಮಾನಗಳನ್ನು ಏರುತ್ತಿದ್ದಾರೆ. ಕಾಬೂಲ್ನಿಂದ ಅಮೆರಿಕಕ್ಕೆ ತೆರಳುತ್ತಿದ್ದ ವಿಮಾನದಿಂದ ಇಬ್ಬರು ಕೆಳಗೆ ಬಿದ್ದಿದ್ದಾರೆ.
ಇತ್ತ ಅಫ್ಘಾನ್ನ ಸಂಸತ್ನ ಮೇಲೂ ದಾಳಿ ನಡೆಸಿರುವ ತಾಲಿಬಾನ್ ಉಗ್ರರು, ಸರ್ಕಾರಿ ಕಚೇರಿಗಳನ್ನು ಒಂದೊಂದಾಗಿ ತಮ್ಮ ವಶಕ್ಕೆ ಪಡೆದುಕೊಂಡು ಅವುಗಳ ಮೇಲೆ ತಮ್ಮ ಬಾವುಟ ನೆಡುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರು ಜಮಾವಣೆಗೊಂಡಿದ್ದು, ಗುಂಡಿನ ದಾಳಿಯಲ್ಲಿ ಐವರು ಅಸುನೀಗಿದ್ದಾರೆ ಎಂದು ವರದಿಯಾಗಿದೆ.
ಕಾಬೂಲ್ ಏರ್‌ಪೋರ್ಟ್‌ನಲ್ಲಿ ಜನಜಂಗುಳಿ
ಅಫ್ಘಾನಿಸ್ತಾನದ ಕಾಬೂಲ್ ಏರ್‌ಪೋರ್ಟ್‌ನಲ್ಲಿ ಜಮಾವಣೆಗೊಂಡಿರುವ ಸಾವಿರಾರು ಜನರು ವಿವಿಧ ದೇಶಗಳಿಗೆ ತೆರಳಲು ನಾ ಮುಂದು, ತಾ ಮುಂದು ಎನ್ನುತ್ತಾ ಪೈಪೋಟಿಗಿಳಿದಿದ್ದಾರೆ. ವಿಮಾನ ಹತ್ತಲು ಹರಸಾಹಸ ಮಾಡುತ್ತಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಈಗಾಗಲೇ ಅಫ್ಘಾನ್ನಿಂದ ವಿವಿಧ ದೇಶಗಳಿಗೆ ತೆರಳುವ ವಿಮಾನಗಳ ಹಾರಾಟ ರದ್ಧುಗೊಂಡಿದೆ.
ಇದನ್ನೂ ಓದಿ: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಗುಂಡಿನ ದಾಳಿಗೆ ಐವರು ಬಲಿ: ಪ್ರಾಣ ರಕ್ಷಿಸಿಕೊಳ್ಳಲು ಅಫ್ಘನ್ನರ ಪರದಾಟ
ಕಳೆದ ಎರಡು ತಿಂಗಳುಗಳಿಂದ ಅಫ್ಘಾನ್ನಲ್ಲಿ ಉಗ್ರರ ಅಟ್ಟಹಾಸ ಹೆಚ್ಚಾಗಿದ್ದು, ಒಂದೊಂದೇ ನಗರವನ್ನು ವಶಪಡಿಸಿಕೊಂಡಿದ್ದರು. ನಿನ್ನೆ ಬೆಳಗ್ಗೆ ವೇಳೆಗೆ ತಾಲಿಬಾನ್ ಇಡೀ ಅಘ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಹೀಗಾಗಿ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ತಾಲಿಬಾನರಿಗೆ ಶರಣಾಗಿ ದೇಶ ತೊರೆದಿದ್ದರು.