ಢಾಕಾ: 'ನನ್ನ ಮೇಲೆ ಅತ್ಯಾಚಾರ ಹಾಗೂ ಕೊಲೆಗೆ ಯತ್ನಿಸಲಾಗಿದೆ' ಎಂದು ಬಾಂಗ್ಲಾದೇಶದ ಖ್ಯಾತ ನಟಿ ಪೋರಿ ಮೋನಿ ಅವರು ಹೇಳಿಕೊಂಡಿದ್ದು, ಪ್ರಧಾನಿ ಶೇಖ್ ಹಸೀನಾ ಅವರನ್ನು ಉದ್ದೇಶಿಸಿ ಫೇಸ್‌ಬುಕ್ ಪೋಸ್ಟ್ ಮಾಡಿ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಪೋರಿ ಮೋನಿ ಫೇಸ್‌ಬುಕ್ ಪೋಸ್ಟ್ ಪೋರಿ ಮೋನಿ ಎಂದೇ ಜನಪ್ರಿಯವಾಗಿರುವ ಶಮ್ಸುನ್ನಹಾರ್ ಸ್ಮ್ರಿತಿ ಬಾಂಗ್ಲಾದೇಶದ ಪ್ರಮುಖ ಸಿನಿಮಾ ತಾರೆಯರಲ್ಲಿ ಒಬ್ಬರಾಗಿದ್ದು, ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಫೋರ್ಬ್ಸ್ ಬಿಡುಗಡೆ ಮಾಡಿದ 'ಏಷ್ಯಾ-ಪೆಸಿಫಿಕ್ನ ಅತ್ಯಂತ ಪ್ರಭಾವಶಾಲಿ ಸೆಲೆಬ್ರಿಟಿಗಳ' ಪಟ್ಟಿಯಲ್ಲಿ (ಸಾಮಾಜಿಕ ಜಾಲತಾಣ ವಿಭಾಗ) ಪೋರಿ ಮೋನಿ ಹೆಸರನ್ನು ಸೇರಿಸಲಾಗಿದೆ.
ಇದೀಗ ಆಘಾತಕಾರಿ ವಿಚಾರವನ್ನು ಹೊರಹಾಕಿರುವ ನಟಿ, ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಅವರನ್ನು 'ಅಮ್ಮಾ' ಎಂದು ಕರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ. "ನಾನೊಬ್ಬ ಹೆಣ್ಣು, ಹೀರೋಯಿನ್, ದೇಶದ ಪ್ರಜೆ.. ಎಲ್ಲದಕ್ಕಿಂತ ಮುಖ್ಯವಾಗಿ ನಾನು ಮನುಷ್ಯಳು. ನಾನು ಸುಮ್ಮನಿರಲು ಸಾಧ್ಯವಿಲ್ಲ. ನನ್ನ ತಾಯಿ ತೀರಿಕೊಂಡಾಗ ನನಗೆ ಸುಮಾರು ಎರಡೂವರೆ ವರ್ಷ. ನನಗೆ ನೀವು ಬೇಕು, ನಾನು ಬದುಕಬೇಕು ಅಮ್ಮಾ" ಎಂದು ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ.
ಪೊಲೀಸರ ಮೊರೆ ಹೋದರೂ ಯಾವುದೇ ಪ್ರಯೋಜನವಾಗಲಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ನಾನು ಅನೇಕ ಜನರ ಸಹಾಯ ಕೇಳಿದ್ದೇನೆ. ಆದ್ರೆ ಯಾರೂ ಸಹಾಯ ಮಾಡಿಲ್ಲ. ನನಗೆ ಎಲ್ಲಿ ನ್ಯಾಯ-ಸರಿಯಾದ ತೀರ್ಪು ಸಿಗುತ್ತದೆ? ಎಂದೂ ನಟಿ ಪ್ರಶ್ನಿಸಿದ್ದಾರೆ.