ಕಾಬೂಲ್(ಅಫ್ಘಾನಿಸ್ತಾನ):ತಾಲಿಬಾನ್ ಉಗ್ರರ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಭಯಭೀತರಾದ ಜನರು ಬೇರೆ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳನ್ನು ಹೇಗಾದರೂ ಕಾಪಾಡಬೇಕು ಎಂದು ಭಾವಿಸಿ ಅಮೆರಿಕದ ಸೈನಿಕರಿಗೆ ಒಪ್ಪಿಸುತ್ತಿರುವ ದೃಶ್ಯಗಳು ಮೊಬೈಲ್ಗಳಲ್ಲಿ ಸೆರೆಯಾಗಿದ್ದವು. ಅಂತೆಯೇ ಪುಟ್ಟ ಕಂದಮ್ಮನನ್ನು ಗೋಡೆಯ ಮೇಲಿಂದ ಸೈನಿಕರಿಗೆ ಹಸ್ತಾಂತರ ಮಾಡುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ದೃಶ್ಯಗಳನ್ನು ಕಂಡ ಜನರು ಮಮ್ಮಲ ಮರುಗಿದ್ದರು. ಇದೀಗ ಆ ಮಗು ಮತ್ತೆ ತನ್ನ ಪೋಷಕರ ಮಡಿಲು ಸೇರಿದೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗೋಡೆಯ ಮೇಲಿಂದ ಮಗುವೊಂದನ್ನು ಯುಎಸ್ ಪಡೆಗೆ ಹಸ್ತಾಂತರ ಮಾಡಲಾಗಿತ್ತು. ತಾಲಿಬಾನ್ ರಕ್ಕಸರ ಕೈಗೆ ಸಿಕ್ಕಿ ಮಗುವಿನ ಪ್ರಾಣಕ್ಕೆ ಕುತ್ತು ಬರಬಹುದು ಎಂದು ಈ ರೀತಿ ಮಾಡಿದ್ದರು. ಆದರೆ ಅಮೆರಿಕ ಪಡೆಯ ಬಳಿಯಿದ್ದ ಮಗು ಮತ್ತೆ ತನ್ನ ತಂದೆ ತಾಯಿಯ ಮುಖ ನೋಡುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಏಕೆಂದರೆ ಮಗುವನ್ನು ಯುಎಸ್ ಸೈನಿಕರು ಅಲ್ಲಿಂದ ಸ್ಥಳಾಂತರ ಮಾಡಿದ್ದರು. ಇದೀಗ ಆ ಕಂದಮ್ಮ ಹೆತ್ತವರ ಮಡಿಲು ಸೇರಿದೆ ಎಂದು ಯುಎಸ್ ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.