ಕಾಬೂಲ್ (ಅಫ್ಘಾನಿಸ್ತಾನ): ಅಮೆರಿಕ ತನ್ನ ಸೇನೆಯನ್ನು ಅಫ್ಘಾನ್‌ನಿಂದ ಹಿಂಪಡೆಯುವ ನಿರ್ಧಾರಕ್ಕೆ ಬರುತ್ತಿದ್ದಂತೆ ತಾಲಿಬಾನಿಗಳು ಅಲ್ಲಿನ ಎಲ್ಲಾ ಪ್ರಾಂತ್ಯಗಳು ಹಾಗೂ ನಗರಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಅಂತಿಮವಾಗಿ ಕಾಬೂಲ್‌ಅನ್ನು ವಶಕ್ಕೆ ಪಡೆದು ಅಲ್ಲಿನ ಸರ್ಕಾರವನ್ನು ಪತನಗೊಳಿಸಿದ್ದರು. ಆದರೆ ಅಫ್ಘಾನಿಸ್ತಾನದಲ್ಲಿರುವ ಪಂಜ್‌ಶೀರ್ ಪ್ರಾಂತ್ಯವನ್ನು ಮಾತ್ರ ಅಲುಗಾಡಿಸಲು ತಾಲಿಬಾನ್‌ಗಳಿಗೆ ಸಾಧ್ಯವಾಗಿರಲ್ಲ. ಕಳೆದ ಕೆಲ ದಿನಗಳ ಹಿಂದೆ ಅಲ್ಲಿನ ನಾಯಕರಿಗೆ ಉಗ್ರರು ಡೆಡ್ ಲೈನ್ ಕೂಡ ನೀಡಿದ್ರು. ಆದರೆ ಇದ್ಯಾವುದಕ್ಕೂ ಜಗ್ಗದ ಪಂಜ್‌ಶೀರ್ ಜನರು ಪ್ರತಿರೋಧಕ್ಕೆ ಸಿದ್ಧರಾಗಿ ನಿಂತಿದ್ದರು. ಆದ್ರೀಗ ಅಲ್ಲಿನ ನಾಯಕರು ಹಾಗೂ ಜನರನ್ನು ನೇರವಾಗಿ ಎದುರಿಸಲಾಗದ ತಾಲಿಬಾನ್ ಕುತಂತ್ರಗಳನ್ನು ಅನುಸುರಿಸುತ್ತಿದೆ.
ಪಂಜ್‌ಶೀರ್‌ಗೆ ಅಂತರ್ಜಾಲದ ಸೌಲಭ್ಯ ಕಡಿತ
ಪಂಜ್‌ಶೀರ್ ನಾಯಕ ಹಾಗೂ ಅಲ್ಲಿನ ಪ್ರಜೆಗಳ ಒಗ್ಗಟ್ಟನ್ನು ಎದುರಿಸಲಾಗದ ತಾಲಿಬಾನ್‌ಗಳು ಇದೀಗ ಪಂಜ್‌ಶೀರ್‌ಗೆ ಇಂಟರ್‌ನೆಟ್ ಸೌಲಭ್ಯವನ್ನು ಸ್ಥಗಿತಗೊಳಿಸಿದ್ದು, ಈ ಕಣಿವೆಗೆ ಹೋಗುವ ರಸ್ತೆಗಳಿಗೂ ನಿರ್ಬಂಧ ವಿಧಿಸಿದ್ದಾರೆ. ಪ್ರಾಂತ್ಯದಲ್ಲಿ ಇಂಟರ್ನೆಟ್ ನೆಟ್‌ವರ್ಕ್ ಕಡಿತಗೊಂಡಿರುವುದರಿಂದ ಫೋನ್ ಬಳಸಲು ಸ್ಥಳೀಯರು ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.