ಕರ್ನಾಟಕ

karnataka

ETV Bharat / international

ಸಾವು, ನಿರುದ್ಯೋಗ: ಕೊರೊನಾ ಹೊಡೆತಕ್ಕೆ ಯುರೋಪ್​, ಅಮೆರಿಕ ತತ್ತರ

ಕೊರೊನಾ ವೈರಸ್​ನಿಂದ ನಿರಂತರ ಸಾವು ಹಾಗೂ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗಳಿಂದ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಕಂಗೆಟ್ಟಿವೆ. ಅಮೆರಿಕದಲ್ಲಿ 10 ಮಿಲಿಯನ್​ ಹಾಗೂ ಯುರೋಪ್​ನಲ್ಲಿ 1 ಮಿಲಿಯನ್​ ಜನ ಕೆಲಸ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

unemployment jump in Europe, US
unemployment jump in Europe, US

By

Published : Apr 3, 2020, 6:15 PM IST

ನ್ಯೂಯಾರ್ಕ್​: ಕೊರೊನಾ ವೈರಸ್​ಗೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನ ಬಲಿಯಾಗುತ್ತಿರುವಂತೆಯೇ ಯುರೋಪ್​, ಅಮೆರಿಕಗಳಲ್ಲಿ ನಿರುದ್ಯೋಗ ಸಮಸ್ಯೆಯೂ ಬೃಹದಾಕಾರ ತಾಳುತ್ತಿದೆ. ಸ್ಪೇನ್, ಇಟಲಿ ಮತ್ತು ಅಮೆರಿಕದ ನ್ಯೂಯಾರ್ಕ್​ನಲ್ಲಿ ಕೊರೊನಾ ವೈರಸ್​ ಹಿಡಿತ ಮೀರಿ ಹರಡುತ್ತಿದ್ದು, ಅಮೆರಿಕದಲ್ಲಿ ಕಳೆದ ಎರಡೇ ವಾರದಲ್ಲಿ 10 ಮಿಲಿಯನ್​ ಜನ ಕೆಲಸ ಕಳೆದುಕೊಂಡಿದ್ದಾರೆ.

ನ್ಯೂಯಾರ್ಕ್​ನಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೂ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ನ್ಯೂಯಾರ್ಕ್​ನ ಸ್ಮಶಾನವೊಂದರ ಬಳಿ 185 ಜನರ ಶವಗಳು ಅಂತ್ಯಸಂಸ್ಕಾರಕ್ಕಾಗಿ ಕಾಯುತ್ತಿವೆ ಎಂದರೆ ಪರಿಸ್ಥಿತಿಯ ಭೀಕರತೆಯನ್ನು ಅರ್ಥ ಮಾಡಿಕೊಳ್ಳಬಹುದು.

ಜಗತ್ತಿನಾದ್ಯಂತ 1 ಮಿಲಿಯನ್​ಗೂ ಅಧಿಕ ಜನರಿಗೆ ಕೊರೊನಾ ಸೋಂಕು ತಗುಲಿದ್ದು, 53 ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಸ್ಪೇನ್​ನಲ್ಲಿ ಗುರುವಾರ ಒಂದೇ ದಿನ 950 ಜನ ಮೃತಪಟ್ಟಿದ್ದು, ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 10 ಸಾವಿರ ದಾಟಿದೆ. ಇಟಲಿಯಲ್ಲಿ ಮತ್ತೆ 760 ಸಾವು ಸಂಭವಿಸಿದ್ದು, ಸದ್ಯ ಹೊಸ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿವೆ.

ಫ್ರಾನ್ಸ್​ನಲ್ಲಿ ಕಳೆದ ದಿನ 471 ಜನ ಮೃತರಾಗಿದ್ದು, ಒಟ್ಟು ಮೃತರ ಸಂಖ್ಯೆ 4,500 ದಾಟಿದೆ.

ಒಂದೆಡೆ ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದರೆ ಮತ್ತೊಂದೆಡೆ ನಿರುದ್ಯೋಗದ ಪ್ರಮಾಣವೂ ಹೆಚ್ಚುತ್ತಿದೆ. ಕಳೆದ ಎರಡು ವಾರಗಳಲ್ಲಿ 10 ಮಿಲಿಯನ್​ ಅಮೆರಿಕನ್ನರು ಕೆಲಸ ಕಳೆದುಕೊಂಡಿದ್ದಾರೆ. ಯುರೋಪ್​ನಲ್ಲಿಯೂ ಕನಿಷ್ಠ ಒಂದು ಮಿಲಿಯನ್​ ಜನ ನಿರುದ್ಯೋಗಿಗಳಾಗಿದ್ದಾರೆ. ಸ್ಪೇನ್​ನಲ್ಲಿ ಮಾರ್ಚ್​ ತಿಂಗಳೊಂದರಲ್ಲಿಯೇ 3 ಲಕ್ಷ ಜನ ಕೆಲಸ ಕಳೆದುಕೊಂಡಿದ್ದಾರೆ.

ABOUT THE AUTHOR

...view details