ವಾಷಿಂಗ್ಟನ್: ಉಕ್ರೇನ್ ಜೊತೆಗಿನ ಉದ್ವಿಗ್ನತೆಯನ್ನು ತಗ್ಗಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಒತ್ತಾಯಿಸಿದ್ದಾರೆ. ಆದಾಗ್ಯೂ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಲು ಮುಂದಾದರೆ ನಾವು, ನಮ್ಮ ಮಿತ್ರರಾಷ್ಟ್ರಗಳು ನಿರ್ಣಾಯಕವಾಗಿ ಪ್ರತಿಕ್ರಿಯಿಸುತ್ತೇವೆ ಎಂದು ಪುಟಿನ್ಗೆ ಬೈಡನ್ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಉಕ್ರೇನ್ ಗಡಿಯಲ್ಲಿ ರಷ್ಯಾ ಯುದ್ಧ ಸಾಮಗ್ರಿಗಳೊಂದಿಗೆ ತನ್ನ ಸುಮಾರು 90,000 ಸೈನಿಕರನ್ನು ನಿಯೋಜಿಸಿದ್ದು, ಸೇನಾ ಬಲವನ್ನು ಮತ್ತಷ್ಟು ಹೆಚ್ಚಿಸುತ್ತಾ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗಿದೆ. ರಷ್ಯಾದ ಈ ನಡೆಯನ್ನು ನ್ಯಾಟೋ (NATO) ಕೂಡ ಖಂಡಿಸಿದೆ. ಅಷ್ಟೇ ಅಲ್ಲ, ಜನವರಿ ತಿಂಗಳ ಆರಂಭದಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡುವ ಸಾಧ್ಯತೆ ಇದೆ ಎಂದು ಯುಎಸ್ ಗುಪ್ತಚರ ವರದಿಗಳು ಹೇಳಿವೆ.
ಪುಟಿನ್ ಹಾಗೂ ಬೈಡನ್ ನಡುವೆ ಗುರುವಾರ 50 ನಿಮಿಷಗಳ ದೂರವಾಣಿ ಸಂಭಾಷಣೆ ನಡೆದಿದ್ದು, ಉಕ್ರೇನ್ ಜೊತೆಗಿನ ಉದ್ವಿಗ್ನತೆಯನ್ನು ತಗ್ಗಿಸಲು ರಷ್ಯಾವನ್ನು ಅಮೆರಿಕ ಒತ್ತಾಯಿಸಿದೆ. ಉಕ್ರೇನ್ ಮೇಲೆ ಆಕ್ರಮಣ ಮಾಡಿದರೆ ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಮಿತ್ರರಾಷ್ಟ್ರಗಳು ನಿರ್ಣಾಯಕವಾಗಿ ಪ್ರತಿಕ್ರಿಯಿಸುವುದಾಗಿ ಬೈಡನ್ ಸ್ಪಷ್ಟಪಡಿಸಿದ್ದಾರೆ ಎಂದು ಶ್ವೇತಭವನ ಮಾಹಿತಿ ನೀಡಿದೆ.
ಏನಿದು ವಿವಾದ?
ಉಕ್ರೇನ್ ಮತ್ತು ರಷ್ಯಾ ನೂರಾರು ವರ್ಷಗಳಿಂದ ಸಾಂಸ್ಕೃತಿಕ, ಭಾಷಾ ಮತ್ತು ಕೌಟುಂಬಿಕ ಸಂಬಂಧಗಳನ್ನು ಹಂಚಿಕೊಂಡು ಬಂದಿವೆ. ರಷ್ಯಾದ ಬಳಿಕ, ಉಕ್ರೇನ್ ಎರಡನೇ ಅತ್ಯಂತ ಶಕ್ತಿಶಾಲಿ ಸೋವಿಯತ್ ಗಣರಾಜ್ಯವಾಗಿತ್ತು. ಸೋವಿಯತ್ ಒಕ್ಕೂಟದಿಂದ ಉಕ್ರೇನ್ ಬೇರ್ಪಟ್ಟಾಗಿನಿಂದ ಉಕ್ರೇನ್ನಲ್ಲಿ ತನ್ನ ಅಧಿಕಾರ ಸ್ಥಾಪಿಸಲು ರಷ್ಯಾ ಪ್ರಯತ್ನಿಸುತ್ತಾ ಬಂದಿದೆ. ಅದರಂತೆ 2014ರಲ್ಲಿ ಯುಕ್ರೇನ್‌ನಿಂದ ಕ್ರಿಮಿಯಾ ಪ್ರದೇಶವನ್ನು ರಷ್ಯಾ ವಶಪಡಿಸಿಕೊಂಡಿತು. ಎರಡನೇ ಮಹಾಯುದ್ಧದ ನಂತರ ಯುರೋಪಿಯನ್ ದೇಶವೊಂದು ಮತ್ತೊಂದು ದೇಶದಿಂದ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದ್ದು ಇದೇ ಮೊದಲಾಗಿತ್ತು.
ಇದನ್ನೂ ಓದಿ:ರಷ್ಯಾದಲ್ಲಿ ಕೋವಿಡ್ ಸಾವು ಹೆಚ್ಚಳ: ಒಂದೇ ತಿಂಗಳಲ್ಲಿ 87,500 ಮಂದಿ ಬಲಿ
ಇತ್ತ ಉಕ್ರೇನ್ ಅನ್ನು ನ್ಯಾಟೋ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್)ಗೆ ಸೇರಿಸಿಕೊಳ್ಳಲು ಅಮೆರಿಕ ಯತ್ನಿಸುತ್ತಿದೆ. ಇದನ್ನು ವಿರೋಧಿಸಿರುವ ರಷ್ಯಾ ನ್ಯಾಟೋಗೆ ಉಕ್ರೇನ್ ಅನ್ನು ಸೇರಿಸಿಕೊಳ್ಳದಂತೆ ಭರವಸೆ ನೀಡುವಂತೆ ಯುಎಸ್ ಬಳಿ ಕೇಳಿದೆ. ಆದರೆ ಈ ಮನವಿಯನ್ನು ಜೋ ಬೈಡನ್ ತಿರಸ್ಕರಿಸಿದ್ದಾರೆ. ಹೀಗಾಗಿ ಉಕ್ರೇನ್ ಮೇಲೆ ಯುದ್ಧ ಸಾರಿ ಅಲ್ಲಿನ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ರಷ್ಯಾ ಸಿದ್ಧತೆ ನಡೆಸುತ್ತಿದೆ. ಉಕ್ರೇನ್ ಬೆಂಬಲಕ್ಕೆ ಅಮೆರಿಕ, ಜಪಾನ್, ಹಂಗೇರಿ, ಬಲ್ಗೇರಿಯಾ, ಫ್ರಾನ್ಸ್ ಸೇರಿದಂತೆ ಅನೇಕ ರಾಷ್ಟ್ರಗಳು ನಿಂತಿವೆ.