ಕರ್ನಾಟಕ

karnataka

ETV Bharat / international

ಭಾರತಕ್ಕೆ 100 ಮಿಲಿಯನ್ ಡಾಲರ್​ ಮೌಲ್ಯದ ವೈದ್ಯಕೀಯ ಸಾಮಗ್ರಿ ಪೂರೈಸಲಿರುವ ಅಮೆರಿಕ - ಅಮೆರಿಕ ಅಧ್ಯಕ್ಷ ಜೋ ಬೈಡನ್

ಕೋವಿಡ್​ ಬಿಕ್ಕಟ್ಟನ್ನು ಎದುರಿಸುತ್ತಿರುವ ಭಾರತಕ್ಕೆ ಅಗತ್ಯ ಸಮಯದಲ್ಲಿ ಅಮೆರಿಕ ಸಹಾಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ 100 ಮಿಲಿಯನ್ ಡಾಲರ್​​​ ಮೌಲ್ಯದ ಆರೋಗ್ಯ ಪರಿಕರಗಳನ್ನು ಕಳುಹಿಸುವುದಾಗಿ ಯುಎಸ್​ ತಿಳಿಸಿದೆ.

Joe biden
ಜೋ ಬೈಡೆನ್

By

Published : Apr 29, 2021, 7:22 AM IST

ವಾಷಿಂಗ್ಟನ್​​: ಕೋವಿಡ್ ಆರಂಭದ ಕಷ್ಟದ ಸಮಯದಲ್ಲಿ ಯುಎಸ್​ಗೆ ಸಹಾಯ ಮಾಡಿದ್ದ ಭಾರತ ಇದೀಗ ಎರಡನೇ ಅಲೆಯಲ್ಲಿ ಸಿಲುಕಿ ಸಂಕಷ್ಟದಲ್ಲಿದೆಯೆಂದು ವಿಶ್ವದ ದೊಡ್ಡಣ್ಣ ಬೆಂಬಲಕ್ಕೆ ನಿಂತಿದೆ. ಅಧ್ಯಕ್ಷ ಜೋ ಬೈಡೆನ್ - ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಆಡಳಿತವು ಭಾರತಕ್ಕೆ ತುರ್ತು ಕೋವಿಡ್ ಸಹಾಯವನ್ನು ನೀಡುತ್ತಿದೆ.

ಸಾಂಕ್ರಾಮಿಕ ಆರಂಭದಿಂದ ಇಲ್ಲಿಯವರೆಗೆ 10 ಮಿಲಿಯನ್ ಭಾರತೀಯರಿಗೆ ನೆರವಾಗುವಂತೆ 23 ಮಿಲಿಯನ್ ಡಾಲರ್ ಮೌಲ್ಯದ ವೈದ್ಯಕೀಯ ಸಾಮಗ್ರಿ ಪೂರೈಸಿರುವ ಅಮೆರಿಕ ಮುಂದಿನ ದಿನಗಳಲ್ಲಿ 100 ಮಿಲಿಯನ್ ಡಾಲರ್​​​ ಮೌಲ್ಯದ ವಸ್ತುಗಳನ್ನು ಪೂರೈಸಲಿದೆ ಎಂದು ಶ್ವೇತಭವನ ತಿಳಿಸಿದೆ.

ಯುಎಸ್​ನಿಂದ ಭಾರತಕ್ಕೆ ಬಂದಿರುವ ಆಮ್ಲಜನಕ ಸಿಲಿಂಡರ್‌ಗಳು

'ನೆರವು ವಿಮಾನಗಳು'

ಇಂದಿನಿಂದ ಆಕ್ಸಿಜನ್​ ಸಿಲಿಂಡರ್​ಗಳು, ಆಮ್ಲಜನಕ ಸಾಂದ್ರಕಗಳು, ಆಮ್ಲಜನಕ ಉತ್ಪಾದನಾ ಘಟಕಗಳು, ಪಿಪಿಇ ಕಿಟ್​ಗಳು, ಲಸಿಕೆ -ಉತ್ಪಾದನಾ ಕಚ್ಚಾ ವಸ್ತುಗಳು, ಕ್ಷಿಪ್ರ ರೋಗನಿರ್ಣಯ ಪರೀಕ್ಷಾ ಸಾಧನಗಳು, ವೆಂಟಿಲೇಟರ್‌ಗಳು ಸೇರಿದಂತೆ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ಅಮೆರಿಕ ಸರ್ಕಾರದ 'ನೆರವು ವಿಮಾನಗಳು' ಭಾರತಕ್ಕೆ ಬರಲಿವೆ. ಮೊದಲ ಹಾರಾಟದಲ್ಲೇ 1,00,000 ಮಾಸ್ಕ್​​ಗಳು ಹಾಗೂ 9,60,000 ಕ್ಷಿಪ್ರ ರೋಗನಿರ್ಣಯ ಪರೀಕ್ಷಾ ಸಾಧನಗಳನ್ನು ಕಳುಹಿಸುತ್ತಿರುವುದಾಗಿ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ) ಮಾಹಿತಿ ನೀಡಿದೆ.

ಭಾರತಕ್ಕೆ 5 ಟನ್ ಆಮ್ಲಜನಕ ಸಾಂದ್ರಕ ಕಳುಹಿಸಿದ್ದ ಅಮೆರಿಕ

ಇದನ್ನೂ ಓದಿ: ಭಾರತಕ್ಕೆ 5 ಟನ್ ಆಮ್ಲಜನಕ ಸಾಂದ್ರಕ ಕಳುಹಿಸಿದ ಅಮೆರಿಕ

ಭಾರತಕ್ಕೆ ಯುಎಸ್​ ನೀಡುತ್ತಿರುವ ಕೋವಿಡ್​ ನೆರವು

  • ಆರಂಭದಲ್ಲಿ 1,100 ಆಕ್ಸಿಜನ್​ ಸಿಲಿಂಡರ್​ಗಳ ಭರವಸೆ - ಈಗಾಗಲೇ ವಿಶ್ವದ ಅತಿದೊಡ್ಡ ಮಿಲಿಟರಿ ವಿಮಾನದಲ್ಲಿ 440 ಆಮ್ಲಜನಕ ಸಿಲಿಂಡರ್‌ಗಳನ್ನು ಕಳುಹಿಸಿರುವ ಕ್ಯಾಲಿಫೋರ್ನಿಯಾ ರಾಜ್ಯ
  • 1700 ಆಮ್ಲಜನಕ ಸಾಂದ್ರಕಗಳು - ಈಗಾಗಲೇ ಐದು ಟನ್ (5000 ಕೆಜಿ) ಆಮ್ಲಜನಕ ಸಾಂದ್ರಕಗಳು ಭಾರತಕ್ಕೆ ಬಂದಿವೆ
  • ಆಮ್ಲಜನಕ ಉತ್ಪಾದನಾ ಘಟಕಗಳು
  • ರೋಗಿಗಳು ಹಾಗೂ ಆರೋಗ್ಯ ಕಾರ್ಯಕರ್ತರಿಗಾಗಿ 15 ಮಿಲಿಯನ್​ N95 ಮಾಸ್ಕ್​​ಗಳನ್ನೊಳಗೊಂಡ ಪಿಪಿಇ ಕಿಟ್​ಗಳು
  • ಲಸಿಕೆ ತಯಾರಿಸಲು ತುರ್ತಾಗಿ ಅಗತ್ಯವಿರುವ ಕಚ್ಚಾ ವಸ್ತುಗಳು - ಇದು 20 ಮಿಲಿಯನ್​ ವ್ಯಾಕ್ಸಿನ್​ ಡೋಸ್​ಗಳನ್ನ ಭಾರತದಲ್ಲಿ ತಯಾರಿಸಲು ಸಹಕಾರಿಯಾಗಲಿದೆ
  • 15 ನಿಮಿಷಗಳಲ್ಲಿ ಸೋಂಕು ಪತ್ತೆಹಚ್ಚುವ ಕ್ಷಿಪ್ರ ರೋಗನಿರ್ಣಯ ಪರೀಕ್ಷಾ ಸಾಧನಗಳು (RDTs)
  • 20,000 ರೆಮ್​ಡೆಸಿವಿರ್​ ಚುಚ್ಚುಮದ್ದು

ಅಭೂತಪೂರ್ವ ಕೋವಿಡ್​-19 ಬಿಕ್ಕಟ್ಟನ್ನು ಎದುರಿಸುತ್ತಿರುವ ಭಾರತಕ್ಕೆ ಅಗತ್ಯ ಸಮಯದಲ್ಲಿ ಸಹಾಯ ಮಾಡಲು ಅಮೆರಿಕ ನಿರ್ಧರಿಸಿದೆ. ಸಾಂಕ್ರಾಮಿಕದ ಆರಂಭದಲ್ಲಿ ನಮ್ಮ ಆಸ್ಪತ್ರೆಗಳು ತೊಂದರೆಗೊಳಗಾಗಿದ್ದಾಗ ಭಾರತ ಸಹಾಯ ಮಾಡಿತ್ತು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಮೋದಿ-ಬೈಡನ್​ ಸಂಗ್ರಹ ಚಿತ್ರ

ಇದನ್ನೂ ಓದಿ: ಭಾರತ ನಮಗಾಗಿ ಇತ್ತು, ಇದೀಗ ನಾವು ಅವರಿಗಾಗಿ ಇರುತ್ತೇವೆ: ಅಮೆರಿಕ ಅಧ್ಯಕ್ಷರ ವಾಗ್ದಾನ

ಕೋವಿಡ್​ ವಿರುದ್ಧದ ಭಾರತದ ಹೋರಾಟದಲ್ಲಿ ಭಾರತದೊಂದಿಗೆ ನಾವು ಜೊತೆಯಾಗಿ ನಿಲ್ಲುತ್ತೇವೆ. ಭಾರತದ ಜನರಿಗೆ ಸಹಾಯ ಮಾಡಲು ಯುನೈಟೆಡ್ ಸ್ಟೇಟ್ಸ್ ನಿರ್ಧರಿಸಿದೆ ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ತಿಳಿಸಿದ್ದಾರೆ.

ಭಾರತದಲ್ಲಿ ದಾಖಲೆಯ ಕೊರೊನಾ ಸಾವು-ನೋವು

ದಾಖಲೆಯ ಸಂಖ್ಯೆಯಲ್ಲಿ ಭಾರತದಲ್ಲಿ ಕೋವಿಡ್​ ಸಾವು-ನೋವು ಸಂಭವಿಸುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್​, ಆಕ್ಸಿಜನ್​ ಕೊರತೆಯೊಂದಿಗೆ ಅನೇಕ ಸೋಂಕಿತರು ರಸ್ತೆ ಮೇಲೆ ಪ್ರಾಣಬಿಡುವ ದುಸ್ಥಿತಿ ಒದಗಿ ಬಂದಿದೆ. ನಿನ್ನೆ ಬಂದಿದ್ದ ಕಳೆದ 24 ಗಂಟೆಗಳ ವರದಿಯಲ್ಲಿ 3,60,960 ಹೊಸ ಕೇಸ್​ಗಳು ಹಾಗೂ 3,293 ಸಾವು ದಾಖಲಾಗಿತ್ತು. ಈವರೆಗೆ ಒಟ್ಟು 1,79,97,267 ಸೋಂಕಿತರು ಪತ್ತೆಯಾಗಿದ್ದು, 2,01,187 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಇದನ್ನೂ ಓದಿ: ಲಸಿಕೆ ತಯಾರಿಸಲು ಭಾರತಕ್ಕೆ ಕಚ್ಚಾ ವಸ್ತು ಪೂರೈಸಲು ಅಮೆರಿಕ ನಿರ್ಧಾರ

ABOUT THE AUTHOR

...view details