ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೇ 29 ರಂದು ಶ್ವೇತ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಒಂದು ಘೋಷಣೆ ಮಾಡಿದರು. “ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಅಮೆರಿಕಾ ತನ್ನ ಸಂಬಂಧಗಳನ್ನು ಕತ್ತರಿಸಿ ಹಾಕುತ್ತಿದ್ದು, ಸದರಿ ಸಂಸ್ಥೆಗೆ ನೀಡಲು ಉದ್ದೇಶಿಸಿದ್ದ ಅನುದಾನಗಳನ್ನು ಜಗತ್ತಿನಾದ್ಯಂತ ಜಾಗತಿಕ ಸಾರ್ವಜನಿಕ ಆರೋಗ್ಯದ ಅವಶ್ಯಕತೆಗಳ ಈಡೇರಿಕೆಗೆ ವಿನಿಯೋಗಿಸಲಿದೆ” ಎಂದು ಹೇಳಿಬಿಟ್ಟರು. ಈ ಹೇಳಿಕೆಯ ಹಿಂದಿನ ನಿರ್ಧಾರಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಅಸಮರ್ಥತೆಯೇ ಕಾರಣವಾಗಿತ್ತು. “ಮುಂದಿನ 30 ದಿನಗಳ ಒಳಗೆ ಗಣನೀಯ ಸುಧಾರಣೆಗಳನ್ನು ತರುವ ಬದ್ಧತೆ ತೋರಬೇಕು” ಎಂಬ ಅಧ್ಯಕ್ಷ ಟ್ರಂಪ್ ಅವರ ಆಗ್ರಹವನ್ನು ಈಡೇರಿಸಲು ಅದು ವಿಫಲವಾಗಿತ್ತು. ತಮ್ಮ ಆಗ್ರಹ ಕುರಿತು ಅಧ್ಯಕ್ಷ ಟ್ರಂಪ್ ಅವರು ಕೇವಲ ಒಂದು ವಾರದ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕರಿಗೆ ಪತ್ರವನ್ನೂ ಬರೆದಿದ್ದರು. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸಹಕಾರ ನೀತಿಯನ್ನು ಕೈಬಿಡುವ ಅಧ್ಯಕ್ಷರ ಈ ನಿರ್ಧಾರದ ಹಿಂದೆ ಅಮೆರಿಕಾದ ಆಂತರಿಕ ಆದ್ಯತೆಗಳನ್ನು ಈಡೇರಿಸುವ ಉದ್ದೇಶಗಳಿದ್ದು, ಅಮೆರಿಕಾದ ಆಡಳಿತದ ಹಿಂದಿನ ದಾರಿಯನ್ನು ನೋಡಿದಾಗ, ಟ್ರಂಪ್ ಅವರ ನಿರ್ಧಾರ ಅದಕ್ಕೆ ಪೂರಕವಾಗಿಯೇ ಇದೆ.
1945ರ ನವೆಂಬರ್‌ನಲ್ಲಿ ಸ್ಥಾಪನೆಯಾಗಿದ್ದ ವಿಶ್ವ ಸಂಸ್ಥೆಯ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಒಕ್ಕೂಟದಿಂದ (ಯುನೆಸ್ಕೊ) ಅಮೆರಿಕಾವು 2017ರ ಅಕ್ಟೋಬರ್‌ನಲ್ಲಿ ಹೊರ ನಡೆದಿತ್ತು. ಅಮೆರಿಕಾದ ಖ್ಯಾತ ಲೇಖಕ ಹಾಗೂ ಯುನೆಸ್ಕೊದ ಮೊದಲ ಆಡಳಿತ ಮಂಡಳಿಯ ಸದಸ್ಯರಾಗಿದ್ದ ಆರ್ಚಿಬಾಲ್ಡ್ ಮ್ಯಾಕ್‌ಲೀಶ್ ಅವರು ಯುನೆಸ್ಕೊ ದಸಂವಿಧಾನದ ಪೀಠಿಕೆಯನ್ನು ಬರೆದಂಥ ವ್ಯಕ್ತಿ. “ಯುದ್ಧಗಳು ಪ್ರಾರಂಭವಾಗುವುದೇ ಮನುಷ್ಯರ ಮನಸ್ಸಿನಲ್ಲಿ; ಆದ್ದರಿಂದ, ಮನುಷ್ಯನ ಮನಸ್ಸಿನಲ್ಲಿಯೇ ಶಾಂತಿ ಸ್ಥಾಪಿಸುವ ವ್ಯವಸ್ಥೆಯನ್ನು ನಿರ್ಮಿಸಬೇಕು” ಎಂಬ ಅವರ ಸಾಲುಗಳು ಸದರಿ ಪೀಠಿಕೆಯಲ್ಲಿವೆ. ಅಮೆರಿಕಾಕ್ಕೆ ಇಂತಹ ಹಿನ್ನೆಲೆ ಇದ್ದರೂ, ಯುನೆಸ್ಕೊದಿಂದ ಹೊರಬೀಳಲು ಟ್ರಂಪ್ ಸರಕಾರ ನಿರ್ಧರಿಸಿಬಿಟ್ಟಿತು. ಯುನೆಸ್ಕೊಕ್ಕೆ ಅದು ನೀಡಬೇಕಿದ್ದ ಬಾಕಿಯಲ್ಲಿ ಉಂಟಾಗಿದ್ದ ಸತತ ಏರಿಕೆ, ಸಂಸ್ಥೆಯಲ್ಲಿ ಮೂಲಭೂತ ಸುಧಾರಣೆಗಳನ್ನು ತರಬೇಕಾದ ಅವಶ್ಯಕತೆ ಹಾಗೂ ಯುನೆಸ್ಕೊ ನಿರಂತರವಾಗಿ ತೋರುತ್ತಿದ್ದ ಇಸ್ರೇಲ್ ವಿರೋಧಿ ನೀತಿಗಳು ಇದಕ್ಕೆ ಪ್ರಮುಖ ಕಾರಣಗಳಾಗಿದ್ದವು.
ಅದಾದ ಒಂದು ವರ್ಷದ ನಂತರ, ಜೂನ್ 2018ರಲ್ಲಿ, ಅಮೆರಿಕವು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯಿಂದಲೂ (ಎಚ್‌ಆರ್‌ಸಿ) ಹೊರಬಿತ್ತು. ಸದರಿ ಸಂಸ್ಥೆ ಸ್ಥಾಪನೆಯಾಗಿದ್ದು ಮೇ 2006ರಲ್ಲಿ; ವಿಶ್ವ ಸಂಸ್ಥೆಯು 2005ರ ಸೆಪ್ಟೆಂಬರ್ನಲ್ಲಿ ಆಚರಿಸಿದ ತನ್ನ 60ನೇ ದಿನಾಚರಣೆ ಶೃಂಗಸಭೆಯ ಮೂಲಕ. ಹೀಗಿದ್ದರೂ, ಸದರಿ ಸಂಸ್ಥೆಯ ರಚನೆಯನ್ನು ವಿರೋಧಿಸುವ ಗೊತ್ತುವಳಿಯನ್ನು (ಇಸ್ರೇಲ್, ಪಲಾವು ಮತ್ತು ಮಾರ್ಶಲ್ ಐಲ್ಯಾಂಡ್ಸ್ ಜೊತೆಗೂಡಿ) ಅಮೆರಿಕವು ಮೇ 2006ರಲ್ಲಿ ಅಂಗೀಕರಿಸಿತು. ಇದಕ್ಕೆ ಕಾರಣ, “ಅತ್ಯಂತ ಹೀನ ಮಾನವ ಹಕ್ಕುಗಳ ಉಲ್ಲಂಘನೆಕಾರರು” ಎಚ್‌ಆರ್‌ಸಿಗೆ ಆಯ್ಕೆಯಾಗುವುದನ್ನು ಈ ಸಮಿತಿಗೆ ತಡೆಗಟ್ಟುವುದು ಸಾಧ್ಯವಾಗದು ಎಂಬ ಅದರ ಅನಿಸಿಕೆ.
ಮುಂದೆ 2006-09ರ ಅವಧಿಯಲ್ಲಿ ಎಚ್‌ಆರ್‌ಸಿಯು ತನ್ನ ಕಾರ್ಯವಿಧಾನ ಮತ್ತು ನಿಯಮಗಳನ್ನು ರೂಪಿಸಿತು. ಈ ಪೈಕಿ 7ನೇ ಕಾರ್ಯಸೂಚಿಯು “ಪ್ಯಾಲೆಸ್ಟೈನ್ ಮತ್ತು ಆಕ್ರಮಿತ ಅರಬ್ ಪ್ರದೇಶಗಳ ಮಾನವ ಹಕ್ಕುಗಳ ಪರಿಸ್ಥಿತಿ”ಯನ್ನು ಕುರಿತಾಗಿತ್ತು. 2006ರಲ್ಲಿ ಎಚ್‌ಆರ್‌ಸಿಗೆ ಸ್ಪರ್ಧಿಸಲು ಇಚ್ಛಿಸದ ಅಮೆರಿಕಾ ಈ ಮಹತ್ವದ ಅವಧಿಯಲ್ಲಿ ಸಭೆಗೆ ಗೈರು ಹಾಜರಾಯಿತು. ಹಾಗೆ ಮಾಡುವ ಮೂಲಕ ಕಾರ್ಯಸೂಚಿ 7ರ ಪ್ರಕಾರ ಇಸ್ರೇಲ್‌ಗೆ ಸಂಬಂಧಿಸಿದಂತೆ ಎಚ್‌ಆರ್‌ಸಿ ನಡೆಸಿದ ಮಾತುಕತೆಗಳಲ್ಲಿ ಹಾಜರಾಗುವುದನ್ನು ಅದು ತಪ್ಪಿಸಿಕೊಂಡಿತು. ಎಚ್‌ಆರ್‌ಸಿಯಿಂದ ಅಮೆರಿಕ ಹೊರಹೋಗಲು ಇಸ್ರೇಲ್ ಕುರಿತಂತೆ ಅದು ಹೊಂದಿರುವ ತೀವ್ರ ಪಕ್ಷಪಾತತನವೇ ಕಾರಣ ಎಂದು ಹೇಳಿದ ಟ್ರಂಪ್ ಸರ್ಕಾರ 47 ಸದಸ್ಯರ ಮಂಡಳಿಯಿಂದ ಅಮೆರಿಕಾವನ್ನು ಹೊರ ತಂದಿತಾದರೂ, 2017-19ರ ಅವಧಿಗೆ ಎಚ್‌ಆರ್‌ಸಿಗೆ ಅದು ಆಯ್ಕೆಯಾಗಿದ್ದನ್ನು ಗಮನಿಸಿದರೆ, ಅದರ ನಡೆ ವಿಪರ್ಯಾಸ ಅನಿಸುತ್ತದೆ.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ, 193 ಸದಸ್ಯರಿರುವ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬೀಳಲು ಟ್ರಂಪ್ ಆಡಳಿತ ನೀಡಿರುವ “ಸಾಕಷ್ಟು ಪ್ರಮಾಣದ ಸುಧಾರಣೆಗಳನ್ನು ಕೈಗೊಳ್ಳಲಿಲ್ಲ” ಎಂಬ ಕಾರಣಗಳು ಅಸ್ಪಷ್ಟ ಅನಿಸುತ್ತವೆ. “ವಿಶ್ವ ಆರೋಗ್ಯ ಸಂಸ್ಥೆಯ ಮೇಲೆ ಚೀನಾ ಪೂರ್ಣ ಹಿಡಿತ ಹೊಂದಿದೆ” ಎಂದು ಟೀಕಿಸಿರುವ ಅಧ್ಯಕ್ಷ ಟ್ರಂಪ್, “ವೈರಸ್ ಅನ್ನು ಚೀನಾ ಸರ್ಕಾರವೇ ಮೊದಲು ಪತ್ತೆ ಮಾಡಿದ್ದರೂ, ಜಗತ್ತನ್ನು ದಾರಿ ತಪ್ಪಿಸಲು ವಿಶ್ವ ಆರೋಗ್ಯ ಸಂಸ್ಥೆಯ ಮೇಲೆ ಒತ್ತಡ ಹಾಕಿತು” ಎಂದು ಆರೋಪಿಸಿದ್ದಾರೆ. ಆದರೆ ಅದೇ ಟ್ರಂಪ್ ಅವರು 24 ಜನವರಿ 2020ರಲ್ಲಿ ಮಾಡಿದ ಟ್ವೀಟ್ ಒಂದರಲ್ಲಿ, “ಕೊರೊನಾ ವೈರಸ್ ದಿಗ್ಬಂಧಿಸಲು ಚೀನಾ ದೇಶ ಅತ್ಯಂತ ತೀವ್ರ ಪ್ರಯತ್ನಗಳನ್ನು ನಡೆಸಿದೆ” ಎಂದು ಕೊಂಡಾಡಿದ್ದರು. ಅಷ್ಟೇ ಅಲ್ಲ, 29 ಫೆಬ್ರವರಿ 2020ರಲ್ಲಿ ನಡೆಸಿದ್ದ ಕೊರೊನಾ ವೈರಸ್ ಸುದ್ದಿಗೋಷ್ಠಿಯಲ್ಲಿ, “ಚೀನಾ ಅತ್ಯಂತ ಗಣನೀಯ ಪ್ರಗತಿಯನ್ನು ಸಾಧಿಸುತ್ತಿರುವಂತೆ ತೋರುತ್ತಿದೆ” ಎಂದು ಘೋಷಿಸಿದ್ದರು.
ವಿಶ್ವ ಆರೋಗ್ಯ ಸಂಸ್ಥೆಯ ಘಟನಾವಳಿಗಳನ್ನು ಕಾಲಾನುಕ್ರಮದಲ್ಲಿ ನೋಡುವುದಾದರೆ, 31 ಡಿಸೆಂಬರ್ 2019ರಂದು ನ್ಯುಮೊನಿಯಾ ರೀತಿಯ ಗುಂಪು ಘಟನೆಗಳು ವುಹಾನ್‌ನಲ್ಲಿ ಕಂಡು ಬಂದಿರುವುದಾಗಿ ಚೀನಾ ಹೇಳಿತ್ತು. ಅದಾದ ನಂತರ, ಸದರಿ ಬೆಳವಣಿಗೆಯನ್ನು ನಿಭಾಯಿಸುವಲ್ಲಿ ಚೀನಾಕ್ಕೆ ನೆರವಾಗಲೆಂದು ಘಟನಾ ನಿರ್ವಹಣಾ ಬೆಂಬಲ ತಂಡವೊಂದನ್ನು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿತು. ವಿಶ್ವ ಆರೋಗ್ಯ ಸಂಸ್ಥೆಯನ್ನು ನಡೆಸುವ 34 ಸದಸ್ಯರ ಕಾರ್ಯಕಾರಿ ಮಂಡಳಿಯ 2018-21ರ ಅವಧಿಯ ಚುನಾಯಿತ ಸದಸ್ಯರ ಪೈಕಿ ಅಮೆರಿಕವೂ ಒಂದಾಗಿದೆ. 2020ರ ಫೆಬ್ರವರಿ 3-6ರ ನಡುವೆ ಈ ಮಂಡಳಿಯು ಸಭೆ ಸೇರಿತು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕರು ಸಭೆಯನ್ನು ಉದ್ದೇಶಿಸಿ ಕೋವಿಡ್-19 ಕುರಿತು ಮಾತಾಡಿದ್ದರು. ಆದರೆ, ಕೋವಿಡ್-19 ಕುರಿತಂತೆ ಚೀನಾದ ಪ್ರತಿಕ್ರಿಯೆ ಕುರಿತು ತನಿಖೆ ನಡೆಸಲು ಅಮೆರಿಕಾದ ಸೆನೆಟ್ ದೃಢಪಡಿಸಿದ್ದ ಹಾಗೂ ಅಧ್ಯಕ್ಷರಿಂದ ನಾಮನಿರ್ದೇಶಿತರಾಗಿದ್ದ ಆರೋಗ್ಯ ಇಲಾಖೆಯ ಸಹಾಯಕ ಕಾರ್ಯದರ್ಶಿ ಅಡ್ಮಿರಲ್ ಬ್ರೆಟ್ ಗಿರಾಯ್ರ್ ಅವರನ್ನು ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗುವಂತೆ ಮಾಡುವಲ್ಲಿ ಟ್ರಂಪ್ ಆಡಳಿತಕ್ಕೆ ಸಾಧ್ಯವಾಗಲಿಲ್ಲ. ತಮ್ಮ ನೇಮಕಾತಿ ದೃಢಪಟ್ಟ ನಂತರ ಕಾರ್ಯಕಾರಿ ಮಂಡಳಿಯ ಸಭೆಗೆ ಮೊಟ್ಟಮೊದಲ ಸಲ ಹಾಜರಾಗಲು ಅಡ್ಮಿರಲ್ ಗಿರೊಯ್ರ್ ಅವರಿಗೆ ಸಾಧ್ಯವಾಗಿದ್ದು 22 ಮೇ 2020ರಂದು ಮಾತ್ರ. ಆದರೆ, ಅವರು ತಮ್ಮ ಗಮನ ಹರಿಸಿದ್ದು “ನಿಷ್ಪಕ್ಷಪಾತ, ಸ್ವತಂತ್ರ ಮತ್ತು ವಿಸ್ತೃತ ಪರಾಮರ್ಶೆಯ” ತಳಹದಿಯ ಮೇಲೆ ಇಂಥದೊಂದು ಸಾಂಕ್ರಾಮಿಕ ಮತ್ತೆಂದು ಮರುಕಳಿಸಬಾರದು” ಎಂಬುದಕ್ಕೆ ಸಂಬಂಧಿಸಿದ ಸುಧಾರಣೆಗಳ ಕುರಿತಂತೆ ಮಾತ್ರ.
ಹೀಗಿದ್ದರೂ, ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬೀಳುವುದಾಗಿ ಅಧ್ಯಕ್ಷ ಟ್ರಂಪ್ ಅವರು ಮಾಡಿರುವ ಘೋಷಣೆಯು 1948ರಲ್ಲಿ ವಿಧಿಸಿದ್ದ ಎರಡು ನಿಬಂಧನೆಗಳನ್ನು ಈಡೇರಿಸಬೇಕಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಗೆ ಸೇರ್ಪಡೆಯಾಗಲು ಒಪ್ಪಿಗೆ ನೀಡುವಾಗ ಆಗಿನ ಅಮೆರಿಕ ಕಾಂಗ್ರೆಸ್ ಈ ನಿಬಂಧನೆಗಳನ್ನು ವಿಧಿಸಿತ್ತು. ಈ ಪೈಕಿ ಮೊದಲನೆಯದು, ಸಂಸ್ಥೆಯಿಂದ ಹೊರಬೀಳುವುದಕ್ಕೆ ಒಂದು ವರ್ಷದ ಮುಂಚೆಯೇ ನೋಟೀಸ್ ನೀಡಿರಬೇಕು ಎಂಬುದು. ಅಂದರೆ, 2021ರ ಮಧ್ಯಭಾಗದವರೆಗೂ ಅಮೆರಿಕ ಇದಕ್ಕಾಗಿ ಕಾಯಬೇಕಾಗುತ್ತದೆ. ಎರಡನೆಯದಾಗಿ, ಪ್ರಸಕ್ತ ಹಣಕಾಸು ಆವೃತ್ತಿಯಲ್ಲಿ ವಿಶ್ವ ಸಂಸ್ಥೆಗೆ ಅದು ನೀಡಬೇಕಿರುವ ಹಣಕಾಸು ಬಾಧ್ಯತೆಗಳನ್ನು ಈಡೇರಿಸಿರಬೇಕು. ಈ ಹಿನ್ನೆಲೆಯಲ್ಲಿ, “ಅರ್ಹ, ಅವಶ್ಯಕತೆ ಇರುವವರಿಗೆ ಹಾಗೂ ಜಗತ್ತಿನಾದ್ಯಂತ ಇರುವ ಸಾರ್ವಜನಿಕ ಆರೋಗ್ಯದ ಅವಶ್ಯಕತೆಗಳನ್ನು ಈಡೇರಿಸಲು ಸದರಿ ಅನುದಾನವನ್ನು ಮರುವಿನಿಯೋಗಿಸಲಾಗುವುದು” ಎಂಬ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆ ಸಾಕಾರವಾಗುವುದು ವಿಶ್ವ ಆರೋಗ್ಯ ಸಂಸ್ಥೆಯಿಂದ ಅದು ಔಪಚಾರಿಕವಾಗಿ ಹೊರಬಿದ್ದಾಗ ಮಾತ್ರ.