ನ್ಯೂಯಾರ್ಕ್(ಯುಎಸ್): ವಿಶ್ವಸಂಸ್ಥೆಯ 76ನೇ ಸಾಮಾನ್ಯ ಅಧಿವೇಶನದಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 'ಪ್ರಜಾಪ್ರಭುತ್ವದ ತಾಯಿ' ಎಂದು ಕರೆಯಲ್ಪಡುವ ದೇಶವನ್ನ ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
"ಟೀ ಸ್ಟಾಲ್ನಲ್ಲಿ ತಂದೆಗೆ ಸಹಾಯ ಮಾಡ್ತಿದ್ದ ಪುಟ್ಟ ಬಾಲಕನಿಂದ ಇಂದು ವಿಶ್ವಸಂಸ್ಥೆಯಲ್ಲಿ ಭಾಷಣ": ನಮೋ
ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ವಿಶ್ವಸಂಸ್ಥೆಯಲ್ಲಿ ಅನಾವರಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಚಹಾ ಮಾರಲು ತಂದೆಗೆ ಸಹಾಯ ಮಾಡ್ತಿದ್ದ ಬಾಲಕನೋರ್ವ ಇದೀಗ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡ್ತಿದ್ದಾರೆ ಎಂಬ ಉದಾಹರಣೆ ನೀಡಿದರು.
'ಒಂದು ಕಾಲದಲ್ಲಿ ಚಹಾ ಅಂಗಡಿಯಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದ ಚಿಕ್ಕ ಹುಡುಗನೋರ್ವ ಇದೀಗ ನಾಲ್ಕನೇ ಬಾರಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದಾನೆ' ಎಂದು ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯನ್ನ ಎತ್ತಿ ತೋರಿಸಿದರು.
ವಿಶ್ವಸಂಸ್ಥೆಯ 76ನೇ ಅಧಿವೇಶನದಲ್ಲಿ ಭಾಗಿಯಾದ ನಮೋ, ಭಾರತದ ಪ್ರಜಾಪ್ರಭುತ್ವದ ಬಗ್ಗೆ ತಿಳಿಸುವ ಉದ್ದೇಶದಿಂದ ಈ ಉದಾಹರಣೆ ಉಲ್ಲೇಖ ಮಾಡಿದರು. ಪ್ರಜಾಪ್ರಭುತ್ವದ ತಾಯಿ ಎಂದು ಕರೆಯಲ್ಪಡುವ ಭಾರತದಿಂದ ಬಂದಿರುವ ನಾನು, ಇದೀಗ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದೇನೆ. ಭಾರತ ಸಾವಿರಾರು ವರ್ಷಗಳ ಪ್ರಜಾಪ್ರಭುತ್ವದ ಇತಿಹಾಸ ಹೊಂದಿದೆ ಎಂದರು.