ವಾಷಿಂಗ್ಟನ್ (ಅಮೆರಿಕ): ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಕ್ವಾಡ್(QUAD) ದೇಶಗಳ ನಾಯಕರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಮೋದಿ ಅವರು ಕಮಲಾ ಹ್ಯಾರಿಸ್ ಸೇರಿದಂತೆ ಮತ್ತಿತರ ಕ್ವಾಡ್ ನಾಯಕರಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಕಮಲಾ ಹ್ಯಾರಿಸ್ ಅವರಿಗೆ ಅವರ ಅಜ್ಜನ ಕಾಲದ ವಸ್ತುಗಳನ್ನು ಮೋದಿ ಗಿಫ್ಟ್ ನೀಡಿದ್ದಾರೆ. ಕಮಲಾ ಹ್ಯಾರಿಸ್ ಅವರ ತಾತ ಪಿ.ವಿ.ಗೋಪಾಲನ್ ಅವರಿಗೆ ಸಂಬಂಧಿಸಿದ ಹಳೆಯ ಅಧಿಸೂಚನೆಗಳ ಪ್ರತಿಯನ್ನು ಮರದ ಕರಕುಶಲತೆಯ ಫ್ರೇಮ್ನಲ್ಲಿ ಉಡುಗೊರೆ ನೀಡಿದ್ದಾರೆ. ಹ್ಯಾರಿಸ್ ಅವರ ಅಜ್ಜ ಪಿ.ವಿ.ಗೋಪಾಲನ್ ಅವರು ಭಾರತದಲ್ಲಿ ಸರ್ಕಾರಿ ಅಧಿಕಾರಿಯಾಗಿ ಉನ್ನತ ಹುದ್ದೆಯಲ್ಲಿ ಇದ್ದವರು.
ಅಲ್ಲದೇ ವಾರಾಣಸಿಯಲ್ಲಿ ತಯಾರಿಸಲಾದ ವಿಶಿಷ್ಠ ಗುಲಾಬಿ ಮೀನಾಕರಿ (ವಾರಾಣಸಿಯ ವಿಶಿಷ್ಟ ಕಲಾಕೃತಿ) ಚೆಸ್ ಸೆಟ್ನ್ನು ಕಮಲಾ ಹ್ಯಾರಿಸ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.