ವಾಷಿಂಗ್ಟನ್( ಅಮೆರಿಕ):ಕೋವಿಡ್ ಜಗತ್ತಿನಾದ್ಯಂತ ಮತ್ತೊಮ್ಮೆ ಆತಂಕ ಸೃಷ್ಟಿಸುವ ಮಟ್ಟಕ್ಕೆ ತಲುಪಿದೆ. ಅಮೆರಿಕದಲ್ಲಿ ಕೇವಲ ನಾಲ್ಕು ತಿಂಗಳಲ್ಲಿ ಗರಿಷ್ಠ ಮಟ್ಟವನ್ನು ಕೋವಿಡ್ ಪ್ರಕರಣಗಳು ತಲುಪಿದ್ದು, ಪ್ರಸ್ತುತ 1 ಲಕ್ಷಕ್ಕೂ ಹೆಚ್ಚು ನಾಗರಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯ ಇತ್ತೀಚಿನ ಮಾಹಿತಿಯ ಪ್ರಕಾರ, ಜನವರಿ 14, 2021ರಂದು ಕೋವಿಡ್ ಕಾರಣದಿಂದ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 1 ಲಕ್ಷದ 42 ಸಾವಿರಕ್ಕಿಂತಲೂ ಹೆಚ್ಚಿತ್ತು. ಈ ಸಂಖ್ಯೆ ದಾಖಲೆ ಸೃಷ್ಟಿ ಮಾಡಿತ್ತು.
ಇದಾದ ನಂತರ ಒಂದು ಲಕ್ಷದ ತಲುಪಿದ್ದು, ಸೆಪ್ಟೆಂಬರ್ 11 2021ರಂದು ಮಾತ್ರ. ಅಲ್ಲಿಂದ ಇಲ್ಲಿವರೆಗೆ ಕೋವಿಡ್ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇತ್ತು. ಈಗ ಮತ್ತೊಮ್ಮೆ ಒಂದು ಲಕ್ಷ ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಹೌದು, ಈಗ ಅಮೆರಿಕದಲ್ಲಿ ಆಸ್ಪತ್ರೆಗೆ ಸೇರಿಕೊಂಡಿರುವರ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಏಳು ರೋಗಿಗಳಲ್ಲಿ ಓರ್ವನಿಗೆ ಕೋವಿಡ್: ಈಗ ಸದ್ಯಕ್ಕೆ ಅಮೆರಿಕದ ಆಸ್ಪತ್ರೆಗಳಲ್ಲಿ ಮುಕ್ಕಾಲು ಭಾಗದಷ್ಟು ಹಾಸಿಗೆಗಳು ಭರ್ತಿಯಾಗಿವೆ. ಆಸ್ಪತ್ರೆಯಲ್ಲಿರುವ ಏಳು ಮಂದಿ ರೋಗಿಗಳಲ್ಲಿ ಓರ್ವ ಕೋವಿಡ್ ರೋಗಿ ಇರುತ್ತಾನೆ ಎಂದು ಅಂಕಿ ಅಂಶಗಳು ಬಹಿರಂಗಪಡಿಸುತ್ತಿವೆ.