ವಾಷಿಂಗ್ಟನ್:59 ಚೀನಾ ಆ್ಯಪ್‌ಗಳನ್ನು ನಿಷೇಧಿಸಿದ ಭಾರತದ ನಿರ್ಧಾರವನ್ನು ಶ್ಲಾಘಿಸಿದ ಅಮೆರಿಕದ ಕ್ಯಾಬಿನೆಟ್‌ನಲ್ಲಿ ಸೇವೆ ಸಲ್ಲಿಸಿದ ಮೊದಲ ಭಾರತೀಯ-ಅಮೆರಿಕನ್ ನಿಕ್ಕಿ ಹ್ಯಾಲೆ ಅವರು, ಇದು ಚೀನಾದ ಆಕ್ರಮಣದಿಂದ ಭಾರತ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.
ಟಿಕ್ಟಾಕ್, ಶೇರ್ ಇಟ್ ಸೇರಿದಂತೆ ಚೀನಾದ ಸಂಸ್ಥೆಗಳ ಒಡೆತನದ 59 ಜನಪ್ರಿಯ ಆ್ಯಪ್‌ಗಳನ್ನು ಭಾರತ ನಿಷೇಧಿಸುವ ಮೂಲಕ ಉತ್ತಮ ಹೆಜ್ಜೆ ಇಟ್ಟಿದೆ ಎಂದು ಟ್ವೀಟ್ನಲ್ಲಿ ಯುಎಸ್ ಮಾಜಿ ರಾಯಭಾರಿಯೂ ಆಗಿದ್ದ ನಿಕ್ಕಿ ಬರೆದುಕೊಂಡಿದ್ದಾರೆ.
ಟಿಕ್ ಟಾಕ್ ಭಾರತದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿತ್ತು. ವಿಶ್ವದಲ್ಲೇ ಅತೀ ಹೆಚ್ಚ ಬಳಕೆದಾರರು ಇದ್ದದ್ದು ಭಾರತದಲ್ಲೇ. ಅದನ್ನು ನಿಷೇಧಿಸುವ ಮೂಲಕ ಚೀನಾಗೆ ಸರಿಯಾಗಿ ತಿರುಗೇಟು ನೀಡಲಾಗಿದೆ ಎಂದು ಹ್ಯಾಲೆ ಹೇಳಿದ್ದಾರೆ.
ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರು ಭಾರತದ ನಡೆಯನ್ನು ಸ್ವಾಗತಿಸಿದ್ದಾರೆ. ಪೊಂಪಿಯೊ ಅವರು ಹೇಳಿಕೆ ನೀಡಿದ ಒಂದು ದಿನದ ನಂತರ ಹ್ಯಾಲಿ ಅವರ ಹೇಳಿಕೆ ಹೊರಬಿದ್ದಿದೆ.
ಕೆಲ ಚೀನಾ ಆ್ಯಪ್‌ಗಳನ್ನು ನಿಷೇಧಿಸಿರುವ ಭಾರತದ ನಡೆಯನ್ನು ನಾನು ಸ್ವಾಗತಿಸುತ್ತೇನೆ. 'ಕ್ಲೀನ್ ಆ್ಯಪ್' ನೀತಿಯು ಚೀನಾದ ಕಮ್ಯುನಿಸ್ಟ್ ಪಕ್ಷದ (ಸಿಸಿಪಿ) ಬೇಹುಗಾರಿಕೆ ವಿರುದ್ಧ ರಾಷ್ಟ್ರೀಯ ಭದ್ರತೆಯನ್ನು ಉತ್ತೇಜಿಸುತ್ತದೆ ಮತ್ತು ಸಾರ್ವಭೌಮತ್ವವನ್ನು ಹೆಚ್ಚಿಸುತ್ತದೆ ಎಂದು ಪೊಂಪಿಯೋ ಮಂಗಳವಾರ ಹೇಳಿದ್ದರು.