ವಾಷಿಂಗ್ಟನ್(ಅಮೆರಿಕ):ಕಳೆದ ತಿಂಗಳು ಕಾಬೂಲ್ನಲ್ಲಿ ಐಸಿಸ್-ಕೆ ಉಗ್ರರು ನಡೆಸಿದ ಆತ್ಮಾಹುತಿ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಡ್ರೋನ್ ದಾಳಿ ನಡೆಸಿದ್ದು ತಪ್ಪಾಯ್ತು ಎಂದು ಹೇಳಿರುವ ಯುಎಸ್ ಉನ್ನತ ಮಿಲಿಟರಿ ಕಮಾಂಡರ್ ಜನರಲ್ ಫ್ರಾಂಕ್ ಮೆಕೆಂಜಿ ಈ ಕುರಿತಂತೆ ಕ್ಷಮೆಯಾಚಿಸಿದ್ದಾರೆ.
ಡ್ರೋನ್ ದಾಳಿಯ ತನಿಖೆಯ ವರದಿ ಬಗ್ಗೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, "ಆಗಸ್ಟ್ 29ರಂದು ಅಫ್ಘಾನಿಸ್ಥಾನದ ಕಾಬೂಲ್ ಏರ್ಪೋರ್ಟ್ ಮೇಲೆ ಐಸಿಸ್-ಕೆ ಉಗ್ರರನ್ನು ಗುರಿಯಾಗಿಸಿಕೊಂಡು ಯುಸ್ ಡ್ರೋನ್ ದಾಳಿ ಮಾಡಿತ್ತು. ಘಟನೆಯಲ್ಲಿ ಮಕ್ಕಳು ಸೇರಿದಂತೆ 10 ಮಂದಿ ನಾಗರಿಕರು ಮೃತಪಟ್ಟಿದ್ದರು. ಇದೊಂದು ದುರಂತ. ಇದು ನಮ್ಮಿಂದಾದ ತಪ್ಪು. ನಾನು ಇದಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಕಮಾಂಡರ್ ಆಗಿ ಈ ದಾಳಿ ಮತ್ತು ದುರಂತಕ್ಕೆ ನಾನು ಸಂಪೂರ್ಣ ಹೊಣೆ" ಎಂದಿದ್ದಾರೆ.
ಇದನ್ನೂ ಓದಿ: Air strike: ಅಫ್ಘಾನ್‌ನಲ್ಲಿ ಯುಎಸ್ ಸೇನೆ ರಣಬೇಟೆ; ವಾಯುದಾಳಿಯಲ್ಲಿ ಕಾಬೂಲ್ ದಾಳಿ ಸಂಚುಕೋರ ಬಲಿ
"ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ನನ್ನ ಸಾಂತ್ವ ತಿಳಿಸುತ್ತೇನೆ. ಅಮೆರಿಕ ಪಡೆಗಳಿಗೆ ಐಸಿಸ್ನಿಂದ ಬೆದರಿಕೆ ಇತ್ತು. ನಮ್ಮಿಂದ ತಪ್ಪಾಗಿದೆ, ಆದರೆ ಆತ್ಮಾಹುತಿ ದಾಳಿಯಲ್ಲಿ ಯುಎಸ್ನ 13 ಸೈನಿಕರು ಸೇರಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ದಾಳಿಯನ್ನು ಪರಿಗಣಿಸಬೇಕು" ಎಂದು ಫ್ರಾಂಕ್ ಮೆಕೆಂಜಿ ಹೇಳಿದ್ದಾರೆ.
ಆ.26 ರಂದು ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ಐಸಿಸ್-ಕೆ ಉಗ್ರರು ನಡೆಸಿದ ಅವಳಿ ಆತ್ಮಾಹುತಿ ದಾಳಿಯಲ್ಲಿ ಅಮೆರಿಕದ 13 ಸೇನಾ ಸಿಬ್ಬಂದಿ ಸೇರಿ ನೂರಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ ಆ.29 ರಂದು ಅಮೆರಿಕ ಕಾಬೂಲ್ನಲ್ಲಿ ಡ್ರೋನ್ ದಾಳಿ ನಡೆಸಿತ್ತು.