ಕರ್ನಾಟಕ

karnataka

By

Published : Mar 26, 2020, 8:16 AM IST

Updated : Mar 26, 2020, 8:34 AM IST

ETV Bharat / international

ಭಾರತೀಯ ವಿದ್ಯಾರ್ಥಿಗಳಿಗೆ ಇಂಡೋ-ಅಮೆರಿಕನ್ ಹೋಟೆಲಿಗರ ಸಹಾಯ

ಅಮೆರಿಕದಲ್ಲಿ ಲಾಕ್​ಡೌನ್​ ಘೋಷಣೆಯಿಂದ ಭಾರತಕ್ಕೆ ಬರಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಭಾರತೀಯ ಅಮೆರಿಕನ್ ಹೋಟೆಲಿಗರು ಸಹಾಯಹಸ್ತ ಚಾಚಿದ್ದಾರೆ.

Indian American hoteliers offer free accommodation,ಇಂಡೋ-ಅಮೆರಿಕನ್ ಹೋಟೆಲಿಗ ಸಹಾಯ
ಇಂಡೋ-ಅಮೆರಿಕನ್ ಹೋಟೆಲಿಗ ಸಹಾಯ

ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ವೈರಸ್ ಸಾಕಷ್ಟು ಭೀತಿ ಸೃಷ್ಟಿಸುತ್ತಿದೆ. ಈಗಾಗಲೇ ಆ ದೇಶದಲ್ಲಿಯೂ ನಮ್ಮ ದೇಶದಂತೆ ಲಾಕ್​ಡೌನ್ ಘೋಷಿಸಲಾಗಿದೆ. ಇಂಥ ಸಂದಿಗ್ಧ ಸಮಯದಲ್ಲಿ ಉಚಿತ ವಸತಿ ಮತ್ತು ಆಹಾರವನ್ನು ನೀಡುವ ಮೂಲಕ ಅಮೆರಿಕದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲು ಭಾರತೀಯ-ಅಮೆರಿಕನ್ ಹೋಟೆಲಿಗರು ಮುಂದಾಗಿದ್ದಾರೆ.

ಕೊರೊನಾ ವೈರಸ್‌ ಹಾವಳಿಯಿಂದಾಗಿ ತಮ್ಮ ಹಾಸ್ಟೆಲ್‌ಗಳನ್ನು ಖಾಲಿ ಮಾಡುವಂತೆ ಅಮೆರಿಕ ಸೂಚಿಸಿದೆ. ಇತ್ತ ಭಾರತವು ಮಾರ್ಚ್ 22 ರಿಂದ ಒಂದು ವಾರ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ನಿಷೇಧಿಸಿದೆ. ವಿದ್ಯಾರ್ಥಿಗಳು ಭಾರತಕ್ಕೆ ಬರಲು ಸಾಧ್ಯವಾಗದೆ ಪರದಾಡುವ ಸ್ಥಿತಿಯಿದೆ. ಈ ವೇಳೆ ಭಾರತೀಯ ರಾಯಭಾರ ಕಚೇರಿಗೆ ಕರೆ ಮಾಡಿದ ನಂತರ ಸುಮಾರು 700 ಹೋಟೆಲ್‌ಗಳಲ್ಲಿ 6,000ಕ್ಕೂ ಹೆಚ್ಚು ಕೊಠಡಿಗಳನ್ನು ಬುಧವಾರದ ವಿದ್ಯಾರ್ಥಿಗಳಿಗಾಗಿ ನೀಡಲಾಗಿದೆ.

ಅಮೆರಿಕದಲ್ಲಿರುವ 2,50,000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗಾಗಿ ಭಾರತೀಯ ರಾಯಭಾರ ಕಚೇರಿ ಕಳೆದ ವಾರದಿಂದ ದಿನದ 24 ಗಂಟೆಯೂ ಸಹಾಯವಾಣಿ ಸೇವೆ ಒದಗಿಸುತ್ತಿದೆ.

ಈ ಬಗ್ಗೆ ಟ್ವೀಟಿಸಿರುವ ಅಮೆರಿಕದ ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು, 'ಭಾರತೀಯ ಮತ್ತು ಇಂಡೋ ಅಮೆರಿಕನ್ ಹಾಗೂ ಇತರ ಹೋಟೆಲ್ ಮಾಲೀಕರು ಜನರ ಸಹಾಯಕ್ಕೆ ಧಾವಿಸುತ್ತಿದ್ದು, ವಸತಿ ಸೌಕರ್ಯಗಳಿಗೆ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ. ಈ ಮಾನವೀಯ ಸೇವೆಯನ್ನು ನೋಡಿದರೆ ಹೃದಯ ತುಂಬಿಬರುತ್ತಿದೆ. ಈ ಮೂಲಕ ನಾವೆಲ್ಲ ಒಟ್ಟಾಗಿ ಕೊವಿಡ್-19 ವಿರುದ್ಧದ ಹೋರಾಟವನ್ನು ಜಯಿಸಬಹುದು' ಎಂದಿದ್ದಾರೆ.

'ಭಾರತೀಯ ಸಮುದಾಯವು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಒಗ್ಗೂಡಿದೆ. ಅನೇಕ ಹೋಟೆಲ್ ಮಾಲೀಕರು ತಮ್ಮ ಕೊಠಡಿಗಳನ್ನು ಅವರಿಗೆ ಉಚಿತವಾಗಿ ನೀಡಿದ್ದಾರೆ. ಅವರಲ್ಲಿ ಹಲವರು ಈ ವಿದ್ಯಾರ್ಥಿಗಳಿಗೆ ಉಚಿತ ಊಟವನ್ನೂ ನೀಡುತ್ತಿದ್ದಾರೆ' ಎಂದು ಚಿಕಾಗೊ ಮೂಲದ ಭಾರತೀಯ ಸಮುದಾಯದ ಮುಖಂಡ ನೀರವ್ ಪಟೇಲ್ ತಿಳಿಸಿದ್ದಾರೆ.

Last Updated : Mar 26, 2020, 8:34 AM IST

ABOUT THE AUTHOR

...view details