ನ್ಯೂಯಾರ್ಕ್ (ಅಮೆರಿಕ):ಭಾರತವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ (ಯುಎನ್‌ಹೆಚ್‌ಆರ್‌ಸಿ) 6ನೇ ಅವಧಿಗೆ (2022-24) ಅತ್ಯಧಿಕ ಬಹುಮತದೊಂದಿಗೆ ಮರು ಆಯ್ಕೆಯಾಗಿದೆ. ಭಾರತವು ‘ಸಮ್ಮಾನ್, ಸಂವಾದ್ ಮತ್ತು ಸಹಯೋಗ್’ ಎಂಬ ಮೂಲ ಧ್ವನಿಯ ಮೂಲಕ ಮಾನವ ಹಕ್ಕುಗಳನ್ನು ಎತ್ತಿಹಿಡಿಯಲು ಮತ್ತು ಸಂರಕ್ಷಿಸುವ ಪ್ರತಿಜ್ಞೆ ಮಾಡಿತು.
ಭಾರತವು 6ನೇ ಅವಧಿಗೆ ವಿಶ್ವಸಂಸ್ಥೆಯ ಮಾಹನ ಹಕ್ಕು ಮಂಡಳಿಗೆ ಬಹುಮತದೊಂದಿಗೆ ಮರು ಆಯ್ಕೆಯಾಗಿದೆ. ವಿಶ್ವಸಂಸ್ಥೆ ನಮ್ಮ ಸದಸ್ಯತ್ವಕ್ಕೆ ನಂಬಿಕೆ ಇರಿಸಿದ್ದಕ್ಕಾಗಿ ಹೃಯಯಪೂರ್ವಕ ಧನ್ಯವಾದಗಳು. ನಾವು ಮಾನವ ಹಕ್ಕುಗಳ ಸಂರಕ್ಷಣೆ ಕೆಲಸ ಮಾಡುತ್ತೇವೆ, ಅದನ್ನು ಮಂದುವರೆಸುತ್ತೇವೆ ಎಂದು ನ್ಯೂಯಾರ್ಕ್ ವಿಶ್ವಸಂಸ್ಥೆಯ ಭಾರತದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.
ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿ ಟಿ.ಎಸ್ ತಿರುಮೂರ್ತಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಭಾರತವು ಮತ್ತಷ್ಟು ಮಾನವ ಹಕ್ಕುಗಳ ಸಮಸ್ಯೆಗಳಿಗೆ ಪರಿಹಾರ ಹುಡುಕಲಿದೆ. ಭಾರತಕ್ಕೆ ಇದು ಹೆಮ್ಮೆಯ ದಿನ. ಭಾರತವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಅತ್ಯಧಿಕ ಬಹುಮತದಿಂದ ಚುನಾಯಿತವಾಗಿದೆ. ಮೂಲ ಹಕ್ಕುಗಳನ್ನು ಅನುಸರಿಸುವ ಪ್ರಜಾಪ್ರಭುತ್ವ ಮತ್ತು ಬಹುಸಂಖ್ಯಾತ ರಾಷ್ಟ್ರವಾಗಿ, ಭಾರತವು ಮತ್ತಷ್ಟು ಮಾನವ ಹಕ್ಕುಗಳ ಸಮಸ್ಯೆಗಳನ್ನು ಬಗೆಹರಿಸಲಿದೆ. ವಿಶ್ವಸಂಸ್ಥೆ ಎಲ್ಲ ಸದಸ್ಯ ರಾಷ್ಟ್ರಗಳು, ಸಹೋದ್ಯೋಗಿಗಳಿಗೂ ಧನ್ಯವಾದಗಳು ಎಂದಿದ್ದಾರೆ.
ಒಟ್ಟು 18 ಸದಸ್ಯ ರಾಷ್ಟ್ರಗಳನ್ನು ಗೌಪ್ಯ ಮತದಾನದಲ್ಲಿ ಆಯ್ಕೆ ಮಾಡಲಾಗಿದೆ. ಕೌನ್ಸಿಲ್ಗೆ ಆಯ್ಕೆಯಾದ ಇತರ ಸದಸ್ಯರು ಅರ್ಜೆಂಟೀನಾ, ಎರಿಟ್ರಿಯಾ, ಫಿನ್ಲ್ಯಾಂಡ್, ಬೆನಿನ್, ಕ್ಯಾಮರೂನ್, ಗ್ಯಾಂಬಿಯಾ, ಹೊಂಡುರಾಸ್, ಖಜಕಿಸ್ತಾನ್, ಲಿಥುವೇನಿಯಾ, ಲಕ್ಸೆಂಬರ್ಗ್, ಮಲೇಷಿಯಾ, ಮಾಂಟೆನೆಗ್ರೊ, ಪರಾಗ್ವೆ, ಖತಾರ್, ಸೊಮಾಲಿಯಾ, ಯುಎಇ ಮತ್ತು ಅಮೆರಿಕ.