ವಾಷಿಂಗ್ಟನ್(ಅಮೆರಿಕ): ತಾಲಿಬಾನ್ ಈಗಾಗಲೇ ಅಫ್ಘಾನಿಸ್ತಾನವನ್ನು ಆಳಲು ಆರಂಭಿಸಿದ್ದು, ಅನೇಕ ಷರಿಯಾ ಕಾನೂನುಗಳನ್ನು ಜಾರಿಗೊಳಿಸಿದೆ. ಅತ್ಯಂತ ಪ್ರಮುಖವಾಗಿ ಅಮೆರಿಕ, ನ್ಯಾಟೋ ಪಡೆಗಳು ಮತ್ತು ಅಫ್ಘನ್ ಪಡೆಗಳು ಬಿಟ್ಟು ಹೋಗಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದು ಸೇನಾ ಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಮತ್ತಷ್ಟು ಆತಂಕ ಎದುರಾಗಿದೆ. ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್‌ಗಳ 68 ಸದಸ್ಯರ ಗುಂಪು ಅಧ್ಯಕ್ಷ ಜೋ ಬೈಡನ್‌ಗೆ ಪತ್ರ ಬರೆದಿದ್ದಾರೆ. ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ. ಅಮೆರಿಕದ ಮುಂದಿನ ನಿಲುವು ಏನು ಎಂಬ ಬಗ್ಗೆ ವಿವರಣೆ ನೀಡಲು ಒತ್ತಾಯಿಸಿದೆ.
ತಾಲಿಬಾನ್ಗೆ ಸದ್ಯಕ್ಕೆ ಅತ್ಯಂತ ವೇಗವಾಗಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಅದು ತನ್ನ ನೆರೆಯ ರಾಷ್ಟ್ರ ಮತ್ತು ಅತ್ಯಾಪ್ತ ರಾಷ್ಟ್ರವಾದ ಪಾಕಿಸ್ತಾನದ ಸರ್ಕಾರವನ್ನು ಅಸ್ಥಿರಗೊಳಿಸದಂತೆ ನೋಡಿಕೊಳ್ಳಬೇಕೆಂದು ಜೋ ಬೈಡನ್‌ಗೆ ಸದಸ್ಯರು ಪತ್ರ ಬರೆದಿದ್ದಾರೆ.
ಪಾಕಿಸ್ತಾನ ತಾಲಿಬಾನ್ನಿಂದ ಅಸ್ಥಿರಗೊಂಡರೇ..
ಒಂದು ವೇಳೆ ತಾಲಿಬಾನ್ ಪಾಕಿಸ್ತಾನ ಸರ್ಕಾರವನ್ನು ಅಸ್ಥಿರಗೊಳಿಸಿದರೆ, ಅಲ್ಲಿನ ಪರಮಾಣು ಬಾಂಬ್ ತಾಲಿಬಾನಿಗಳ ವಶವಾಗಲಿವೆ ಎಂಬುದು ಅಮೆರಿಕ ಸಂಸದರ ಕಳವಳವಾಗಿದ್ದು, ಈ ಸನ್ನಿವೇಶವನ್ನು ತಡೆಯಲು ಅಮೆರಿಕ ಕೈಗೊಂಡ ಕ್ರಮ ಏನು ಎಂದು ಜೋ ಬೈಡನ್ ಅವರನ್ನು ಪ್ರಶ್ನಿಸಲಾಗಿದೆ.
ಈಗಾಗಲೇ ಅಮೆರಿಕದ ಶಸ್ತ್ರಗಳು ತಾಲಿಬಾನ್ ಅನ್ನು ಸೇರಿದ್ದು, ಅವುಗಳನ್ನು ಹಿಂಪಡೆಯಲು ತೆಗೆದುಕೊಳ್ಳಲಾದ ಕ್ರಮಗಳೇನು ಎಂದು ಪ್ರಶ್ನಿಸಿರುವ ಜೊತೆಗೆ ತಾಲಿಬಾನ್ ಜೊತೆ ಚೀನಾ ತನ್ನ ಸ್ನೇಹ ವೃದ್ಧಿಗೆ ಮುಂದಾಗಿದ್ದು, ಇದು ಮತ್ತಷ್ಟು ಕಳವಳಕಾರಿ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಆಗಸ್ಟ್ 31ರ ನಂತರ..
ಅಮೆರಿಕ ಈ ಮೊದಲೇ ಹೇಳಿದ್ದಂತೆ ಆಗಸ್ಟ್ 31ರೊಳಗೆ ತನ್ನ ಎಲ್ಲಾ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಿದೆ. ಆದರೆ ಆಗಸ್ಟ್ 31ರ ನಂತರವೂ ರಾಜತಾಂತ್ರಿಕ ಸಂಬಂಧ ಅಥವಾ ಅಧಿಕಾರಿಗಳನ್ನು ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಹಲವಾರು ಆಯ್ಕೆಗಳಿದ್ದು, ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಅಮೆರಿಕ ವಿದೇಶಾಂಗ ಸಚಿವ ಆ್ಯಂಟೋನಿ ಬ್ಲಿಂಕನ್ ಮಾಹಿತಿ ನೀಡಿದ್ದಾರೆ.
ನಮಗಿಷ್ಟ ಇದ್ದರೂ, ಇಲ್ಲದಿದ್ದರೂ ಅಫ್ಘನ್ ಅನ್ನು ಬಹುವಾಗಿ ವಶಕ್ಕೆ ಪಡೆದಿರುವ ತಾಲಿಬಾನ್ನೊಂದಿಗೆ ವ್ಯವಹಾರ ಇಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ಅಲ್ಲಿನ ಅಮೆರಿಕನ್ನರು, ಅಮೆರಿಕಕ್ಕೆ ಕೆಲಸ ಮಾಡಿದ ಅಫ್ಘನ್ನರು ಮತ್ತು ಮಿತ್ರರಾಷ್ಟ್ರಗಳ ಸುರಕ್ಷತೆ ನಮ್ಮ ಆದ್ಯತೆ ಎಂದು ಬ್ಲಿಂಕನ್ ನುಡಿದಿದ್ದಾರೆ.
ಅಫ್ಘನ್ನಲ್ಲಿ ಬರುವ ಸರ್ಕಾರವು ಅಲ್ಲಿನ ಜನರ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯಬೇಕು. ಅದಕ್ಕೆ ಬದಲಾಗಿ ನಮ್ಮ ಮತ್ತು ನಮ್ಮ ಮಿತ್ರರಾಷ್ಟ್ರಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಭಯೋತ್ಪಾದಕ ದಾಳಿ ಕೇಂದ್ರವಾದರೆ, ನಮ್ಮಿಂದಲೂ ಸಶಸ್ತ್ರ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದ ಬ್ಲಿಂಕನ್ ಹೇಳಿದ್ದಾರೆ.
ಒಂದೂವರೆ ಸಾವಿರ ಮಂದಿ..
ಅಫ್ಘಾನಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಕಾಣಿಸಿಕೊಂಡಾಗಿನಿಂದ ಎಲ್ಲಾ ರಾಷ್ಟ್ರಗಳು ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ತಮ್ಮ ನಾಡಿಗೆ ಕರೆತರಲು ಯತ್ನಿಸುತ್ತಿವೆ. ಈಗಾಗಲೇ ಅಮೆರಿಕ ಸಾಕಷ್ಟು ಮಂದಿಯನ್ನು ಏರ್ಲಿಫ್ಟ್ ಮಾಡಿದೆ.
ಅಮೆರಿಕ ವಿದೇಶಾಂಗ ಸಚಿವ ಆ್ಯಂಟೋನಿ ಬ್ಲಿಂಕನ್ ಹೇಳುವಂತೆ ಸುಮಾರು 4,500 ಮಂದಿ ಅಮೆರಿಕನ್ನರನ್ನು ಅಫ್ಘಾನಿಸ್ತಾನದಿಂದ ಏರ್ಲಿಫ್ಟ್ ಮಾಡಲಾಗಿದೆ. ಸುಮಾರು ಒಂದೂವರೆ ಸಾವಿರ ಮಂದಿ ಅಮೆರಿಕನ್ನರು ಅಲ್ಲಿಯೇ ಉಳಿದುಕೊಂಡಿದ್ದು, ಅವರನ್ನೂ ಕೆಲವೇ ದಿನಗಳಲ್ಲಿ ಏರ್ಲಿಫ್ಟ್ ಮಾಡಲಾಗುತ್ತದೆ.