ನ್ಯೂಯಾರ್ಕ್ (ಅಮೆರಿಕ): ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳು ಮಧ್ಯ ಏಷ್ಯಾ ಪ್ರದೇಶದ ಮೇಲೆ ವ್ಯಾಪಕವಾದ ಪರಿಣಾಮಗಳನ್ನು ಬೀರುತ್ತವೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಹೇಳಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮುಕ್ತ ಚರ್ಚೆಯಲ್ಲಿ ಭಾಗವಹಿಸಿದ ತಿರುಮೂರ್ತಿ "ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ನಿರ್ವಹಣೆಯಲ್ಲಿ ವಿಶ್ವಸಂಸ್ಥೆ ಮತ್ತು ಪ್ರಾದೇಶಿಕ ಮತ್ತು ಉಪ-ಪ್ರಾದೇಶಿಕ ಸಂಸ್ಥೆಗಳ ನಡುವಿನ ಸಹಕಾರ: ವಿಶ್ವಸಂಸ್ಥೆ ಮತ್ತು ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆ (ಸಿಎಸ್‌ಟಿಒ) ನಡುವಿನ ಸಹಕಾರ" - ಈ ವಿಷಯದ ಕುರಿತು ಮಾತನಾಡಿದರು.
ಕಳೆದ ವರ್ಷ ಆಗಸ್ಟ್ ಮಧ್ಯದಲ್ಲಿ ತಾಲಿಬಾನ್ ಉಗ್ರ ಸಂಘಟನೆ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದ ಪರಿಸ್ಥಿತಿಯು ತೀವ್ರವಾಗಿ ಹದಗೆಟ್ಟಿದೆ. ವಿದೇಶಿ ನೆರವಿನ ಅಮಾನತು, ತಾಲಿಬಾನ್ ಮೇಲಿನ ಅಂತಾರಾಷ್ಟ್ರೀಯ ನಿರ್ಬಂಧಗಳು ಈಗಾಗಲೇ ಹೆಚ್ಚಿನ ಬಡತನದಿಂದ ಬಳಲುತ್ತಿರುವ ದೇಶವನ್ನು ಪೂರ್ಣ ಪ್ರಮಾಣದ ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿಸಿದೆ. ಅಫ್ಘಾನ್ನಲ್ಲಿನ ಬೆಳವಣಿಗೆಗಳು, ವಿಶೇಷವಾಗಿ ಅಲ್ಲಿಂದ ಹೊರಹೊಮ್ಮುವ ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆಯು ಮಧ್ಯ ಏಷ್ಯಾ ಮೇಲೆ ಪರಿಣಾಮ ಬೀರುತ್ತದೆ ಎಂದು ತಿರುಮೂರ್ತಿ ತಿಳಿಸಿದ್ದಾರೆ.