ಕರ್ನಾಟಕ

karnataka

ETV Bharat / international

ಸೋತ್ರೆ ದೇಶ ಬಿಡ್ಬೇಕಾಗ್ಬೋದು ಎಂದ ಟ್ರಂಪ್​ಗೆ ''ಭರವಸೆ'' ಕೇಳಿದ ಬಿಡೆನ್!

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಗೆಲ್ಲಲು ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷಗಳು ಸಾಕಷ್ಟು ಕಸರತ್ತು ನಡೆಸುತ್ತಿವೆ. ಪಕ್ಷದ ಅಭ್ಯರ್ಥಿಗಳ ನಡುವೆ ನಡೆಯುವ ವಾದ-ವಿವಾದಗಳು, ಆರೋಪ- ಪ್ರತ್ಯಾರೋಪಗಳು ತಾರಕಕ್ಕೆ ಏರಿವೆ.

trump, biden
ಟ್ರಂಪ್​, ಬಿಡೆನ್

By

Published : Oct 18, 2020, 5:29 PM IST

ವಾಷಿಂಗ್ಟನ್: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಪ್ರಚಾರಗಳಲ್ಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್​ ಟ್ರಂಪ್ ತಾವು ಈ ಬಾರಿ ಚುನಾವಣೆಯಲ್ಲಿ ಸೋತರೆ ದೇಶ ಬಿಡಬೇಕಾಗಬಹುದು ಎಂದು ಹೇಳಿಕೆ ನೀಡುತ್ತಿದ್ದು, ಚರ್ಚೆಗೆ ಗ್ರಾಸವಾಗುತ್ತಿದೆ.

ಈ ಕುರಿತು ಟ್ವೀಟ್ ಮಾಡಿರುವ ಡೆಮಾಕ್ರಟಿಕ್ ಪಕ್ಷದಿಂದ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜೋ ಬಿಡೆನ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಟ್ರಂಪ್​ ತಾವು ದೇಶಬಿಡುತ್ತೇನೆ ಎಂದು ಹೇಳಿರುವ ಎಲ್ಲಾ ಭಾಷಣಗಳ ತುಣುಕನ್ನು ನೀಡಲಾಗಿದೆ.

ಅಮೆರಿಕದ ರಾಜ್ಯಗಳಲ್ಲಿ ಚುನಾವಣಾ ರ‍್ಯಾಲಿ ನಡೆಸುವ ವೇಳೆ ಕೆಲವೊಮ್ಮೆ ನಾನು ಸೋತರೆ, ಮತ್ತೊಮ್ಮೆ ಖಂಡಿತಾ ಇಲ್ಲಿಗೆ ಬರಲಾರೆ ಎಂದು ಹೇಳಿಕೊಂಡಿದ್ದಾರೆ. ಮತ್ತೆ ಕೆಲವೆಡೆ ನಾನು ಸೋತರೆ ಅಮೆರಿಕವನ್ನೇ ಬಿಡಬೇಕಾಗುವ ಪರಿಸ್ಥಿತಿ ಒದಗಿಬರಬಹುದು ಎಂದು ಹೇಳಿದ್ದಾರೆ.

ಲೋವಾ, ಫ್ಲೋರಿಡಾ, ನಾರ್ಥ್​ ಕೆರೊಲಿನಾ, ಓಹಿಯೋ, ಮಿನ್ನೆಸೋಟಾದಲ್ಲಿ ಈ ರೀತಿಯಾಗಿ ಹೇಳಿಕೊಂಡಿದ್ದು, ಜೋ ಬಿಡೆನ್ ಈ ವಿಡಿಯೋಗಳ ತುಣುಕನ್ನು ಜೋಡಿಸಿ, ಟ್ವಿಟರ್​ನಲ್ಲಿ ವ್ಯಂಗ್ಯವಾಡಿದ್ದಾರೆ. ಇದರ ಜೊತೆಗೆ ''ಪ್ರಾಮಿಸ್ ..?'' ಎಂದು ಪ್ರಶ್ನಿಸಿ, ಮತ್ತೊಮ್ಮೆ ಕಾಲೆಳೆದಿದ್ದಾರೆ. ಈ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟ್ರಂಪ್​ ಕೂಡಾ ಇದಕ್ಕೂ ಮೊದಲು ಜೋ ಬಿಡೆನ್ ಅವರನ್ನು ವ್ಯಂಗ್ಯವಾಡಿದ್ದರು. ಅಮೆರಿಕದ ರಾಜಕೀಯ ಇತಿಹಾಸದಲ್ಲೇ ಅತಿ ದುರ್ಬಲ ರಾಜಕಾರಣಿಯೊಂದಿಗೆ ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿ ಬಿಡೆನ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಶನಿವಾರಷ್ಟೇ ''ಈ ಬಾರಿಯ ಚುನಾವಣೆ ಟ್ರಂಪ್​​​ನ ಚೇತರಿಕೆ ಹಾಗೂ ಬಿಡೆನ್​ ಖಿನ್ನತೆಯ ನಡುವಿನ ಆಯ್ಕೆ'' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಂಗ್ಯವಾಡಿದ್ದರು.

ABOUT THE AUTHOR

...view details