ವಾಷಿಂಗ್ಟನ್:ಹವಾಮಾನ ಬಿಕ್ಕಟ್ಟು ಅಮೆರಿಕದ ಹೋರಾಟ ಮಾತ್ರವಲ್ಲ. ಇದು ಜಾಗತಿಕ ಮಟ್ಟದ ಹೋರಾಟ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಪಾಲ್ಗೊಂಡು ತಮ್ಮ ಮೊದಲ ಭಾಷಣ ಮಾಡಿದ ಅವರು ಜಾಗತಿಕ ಹವಾಮಾನ ಕುರಿತು ಪ್ರಸ್ತಾಪಿಸಿದರು. ಅಮೆರಿಕ ಇಂಗಾಲದ ಹೊರಸೂಸುವಿಕೆಯ ಶೇಕಡಾ 15 ಕ್ಕಿಂತ ಕಡಿಮೆ ಇದ್ದರೆ, ವಿಶ್ವದ ಉಳಿದ ಭಾಗವು ಶೇಕಡಾ 85 ರಷ್ಟಿದೆ ಎಂದು ಅವರು ಹೇಳಿದರು. ಅದಕ್ಕಾಗಿಯೇ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಮತ್ತೆ ಸೇರ್ಪಡೆಗೊಳ್ಳುವ ಬದ್ಧತೆಯನ್ನು ನಾನು ಉಳಿಸಿಕೊಂಡಿದ್ದೇನೆ ಎಂದು ಹೇಳಿದರು.
ಪ್ಯಾರಿಸ್ ಒಪ್ಪಂದವೇನು?
ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಸಹಿ ಹಾಕಿದರೆ, ಅವರ ಬಳಿಕ ಅಧಿಕಾರಕ್ಕೆ ಬಂದ ಡೊನಾಲ್ಡ್ ಟ್ರಂಪ್ ಅದನ್ನು ಹಿಂತೆಗೆದುಕೊಂಡರು. ಇದು ಅಮೆರಿಕದ ಕಲ್ಲಿದ್ದಲು ಗಣಿಗಾರರಿಗೆ ಮತ್ತು ಇಂಧನ ಉದ್ಯಮಕ್ಕೆ ಅಡ್ಡಿಯಾಗಿತ್ತು. ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಕೂಡಲೇ ಬೈಡನ್ ಮತ್ತೆ ಈ ಒಪ್ಪಂದ ಸೇರಿಕೊಂಡಿದ್ದಾರೆ.