ಬೀಜಿಂಗ್:ಭೂಮಂಡಲವನ್ನೇ ತನ್ನ ಅಟ್ಟಹಾಸದಿಂದ ನಲುಗಿಸಿದ ಮಹಾಮಾರಿ ಕೊರೊನಾ ಮೂಲ ಯಾವುದೆಂಬುದೇ ಇನ್ನೂ ಬೆಳಕಿಗೆ ಬಂದಿಲ್ಲದಿರುವಾಗಿ ಆಘಾತಕಾರಿ ಮಾಹಿತಿಯೊಂದು ಹೊರಬಂದಿದೆ. ಚೀನಾದ ಸಂಶೋಧಕರು ಬಾವಲಿಗಳಲ್ಲಿ ಹೊಸ ತಳಿಯ ಕೊರೊನಾ ವೈರಸ್ ಅನ್ನು ಪತ್ತೆ ಮಾಡಿರುವುದಾಗಿ ತಿಳಿಸಿದ್ದಾರೆ.
ಕೋವಿಡ್-19 (SARS-CoV-2)ಗೆ ಕಾರಣವಾಗುವ ಎರಡನೇ ವೈರಸ್ ಇದಾಗಿದೆ ಎಂದು ಚೀನಾದ ಶಾಂಡೊಂಗ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳುತ್ತಾರೆ. ಇವರ ಸಂಶೋಧನೆಯ ವರದಿಯು 'ಸೆಲ್' (Cell) ಎಂಬ ಜರ್ನಲ್ನಲ್ಲಿ ಪ್ರಕಟವಾಗಿದೆ. ಸೆಲ್, ಇದು ಜೀವ ವಿಜ್ಞಾನಗಳ ಕುರಿತ ವರದಿಗಳನ್ನು ಪ್ರಕಟಿಸುವ ಜರ್ನಲ್ ಆಗಿದೆ.
ಮೇ 2019 ರಿಂದ ನವೆಂಬರ್ 2020ರ ನಡುವೆ ಸಂಶೋಧನೆ ನಡೆಸಲಾಗಿದ್ದು, ಅರಣ್ಯಗಳಲ್ಲಿ ವಾಸಿಸುವ ವಿವಿಧ ಪ್ರಭೇದಗಳ ಬಾವಲಿಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅವುಗಳ ಮೂತ್ರ, ಮಲ ಹಾಗೂ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಬಾವಲಿಗಳಲ್ಲಿ ಪತ್ತೆಯಾದ 24 ವೈರಸ್ಗಳ ಪೈಕಿ ಒಂದು ವೈರಸ್ SARS-CoV-2 ಲಕ್ಷಣವನ್ನು ಹೋಲುತ್ತದೆ ಎಂದು ಸಂಶೋಧನಾಕಾರರು ತಿಳಿಸಿದ್ದಾರೆ.