ನ್ಯೂಯಾರ್ಕ್ :ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಪಾಕ್ ವಿರುದ್ಧ ನೇರ ವಾಗ್ದಾಳಿ ನಡೆಸಿದಾರೆ. ಅನೇಕ ಮಹತ್ವದ ವಿಷಯಗಳ ಬಗ್ಗೆ ಪ್ರಧಾನಿ ಬೆಳಕು ಚೆಲ್ಲಿದ್ದಾರೆ.
ಭಾರತದಲ್ಲಿ ವ್ಯಾಕ್ಸಿನ್ ತಯಾರಿಕೆಗೆ ನಮೋ ಆಹ್ವಾನ ತಮ್ಮ ಭಾಷಣದಲ್ಲಿ ಕೋವಿಡ್ ವಿರುದ್ಧದ ಲಸಿಕೆ ತಯಾರಕರಿಗೆ ಭಾರತಕ್ಕೆ ಬಂದು ವ್ಯಾಕ್ಸಿನೇಷನ್ ತಯಾರಿಕೆ ಮಾಡಲು ಆಹ್ವಾನ ನೀಡಿದ್ದಾರೆ. ಕೊರೊನಾ ಸಾಂಕ್ರಾಮಿಕದ ವಿರುದ್ಧ ಜಗತ್ತು ಹೋರಾಟ ನಡೆಸಿದ್ದು, ಇದೇ ಕಾರಣಕ್ಕಾಗಿ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದೇವೆ. ಆದರೆ, ಇದೀಗ ನಾವು ಆತ್ಮನಿರ್ಭರ್ ಭಾರತ ಅಭಿಯಾನದಿಂದ ಅನೇಕ ಯೋಜನೆ ಹಮ್ಮಿಕೊಂಡಿದ್ದು, ಇದು ಆರ್ಥಿಕ ಸಬಲತೆಗೆ ಕಾರಣವಾಗಿದೆ ಎಂದರು.
ಸಮಾನತೆ ಅಭಿವೃದ್ಧಿಯ ಹಾದಿಯಲ್ಲಿ ಭಾರತ ಸಾಗಿದೆ. ಇದರ ಮುಖ್ಯ ಆದ್ಯತೆ ಅಭಿವೃದ್ಧಿ ಎಲ್ಲರನ್ನೂ ಒಳಗೊಳ್ಳಬೇಕು. ಎಲ್ಲವನ್ನು ಪೋಷಿಸಬೇಕು ಎಂದು ತಿಳಿಸಿದರು. ಇಂದು ಏಕತಾ ಮಾನವ ದರ್ಶನದ ಪ್ರತಿಪಾದಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನವಾಗಿದೆ. ಮಾನವತಾವಾದ ಒಟ್ಟಿಗೆ ತೆಗೆದುಕೊಂಡು ಹೋಗಬೇಕಾದ ಅವಶ್ಯಕತೆ ಇದೆ ಎಂದು ನಮೋ ತಿಳಿಸಿದರು.
ಕಳೆದ 1.5 ವರ್ಷದಿಂದ ಇಡೀ ವಿಶ್ವ ಮಹಾಮಾರಿ ಸಾಂಕ್ರಾಮಿಕದ ವಿರುದ್ಧ ಹೋರಾಟ ನಡೆಸಿದೆ. ಸುಮಾರು 100 ವರ್ಷದ ಬಳಿಕ ಇಡೀ ಪ್ರಪಂಚವೇ ಭೀಕರ ಸಾಂಕ್ರಾಮಿಕ ರೋಗ ಎದುರಿಸುತ್ತಿದೆ. ಈ ಮಾರಕ ರೋಗಕ್ಕೆ ಪ್ರಾಣ ಕಳೆದುಕೊಂಡ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ ಹಾಗೂ ಅವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ ಎಂದರು.
ಭಾರತ ವಿಶ್ವದ ಮೊದಲ ಡಿಎನ್ಎ ಲಸಿಕೆ ಅಭಿವೃದ್ಧಿಪಡಿಸಿದೆ. ಇದನ್ನ ಯುಎನ್ಜಿಎಗೆ ತಿಳಿಸಲು ನಾನು ಬಯಸುತ್ತೇನೆ. ಈ ಲಸಿಕೆಯನ್ನ 12 ವರ್ಷಕ್ಕಿಂತ ಮೇಲ್ಪಟ್ಟ ಯಾರಿಗಾದರೂ ನೀಡಬಹುದು. ಭಾರತೀಯ ವಿಜ್ಞಾನಿಗಳು ಕೋವಿಡ್ ವಿರುದ್ಧದ ಲಸಿಕೆ ಅಭಿವೃದ್ಧಿಪಡಿಸಲು ಸತತ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿಸಿದರು.