ಬ್ರಸಿಲ್ಲಾ:ಬ್ರೆಜಿಲ್ನ ಬ್ರಿಸಿಲ್ಲಾದಲ್ಲಿ ನಡೆಯುತ್ತಿರುವ 11ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಭಾಷಣೆ ನಡೆಸಿದರು.
ಪುಟಿನ್ ಅವರೊಂದಿಗೆ ಸಭೆಯಲ್ಲಿ ಕಳೆದ ಕ್ಷಣ ಅತ್ಯುತ್ತಮವಾಗಿತ್ತು. ಭಾರತ-ರಷ್ಯಾ ನಡುವಿನ ಸ್ನೇಹ ಸೌಹಾರ್ದತೆ ಹೀಗೆ ಮುಂದುವರಿಯಲಿದೆ. ವ್ಯಾಪಾರ, ಭದ್ರತೆ ಮತ್ತು ಸಂಸ್ಕೃತಿಯಂತಹ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳು ಜಂಟಿಯಾಗಿ ಸಾಗಲಿವೆ. ನಿಕಟವಾದ ದ್ವಿಪಕ್ಷೀಯ ಸಂಬಂಧಗಳಿಂದ ಭಾರತೀಯರಿಗೆ ಹೆಚ್ಚಿನ ಪ್ರಯೋಜನ ಆಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
2025ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವು 25 ಬಿಲಿಯನ್ ಡಾಲರ್ ತಲುಪುವ ಗುರಿ ಇರಿಸಿಕೊಳ್ಳಲಾಗಿತ್ತು. ಈಗಾಗಲೇ ಈ ಗುರಿಯನ್ನು ನಾವು ತಲುಪಿದ್ದೇವೆ. ಮುಂದಿನ ವರ್ಷ ರಷ್ಯಾ ಪ್ರಾಂತ್ಯಗಳ ಮತ್ತು ಭಾರತದ ರಾಜ್ಯಗಳ ಮಟ್ಟದ ಮೊದಲನೇ ದ್ವಿಪಕ್ಷೀಯ ಪ್ರಾದೇಶಿಕ ಶೃಂಗಸಭೆ ನಡೆಯಲಿದೆ ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ಮೋದಿ, ನಾವು ಚೆನ್ನೈನಲ್ಲಿ ಭೇಟಿಯಾಗಿದ್ದು, ನಮ್ಮ ಭವಿಷ್ಯದ ಪ್ರಯಾಣಕ್ಕೆ ಹೊಸ ಶಕ್ತಿಯನ್ನು ನೀಡಿತ್ತು ಎಂದರು. ಚೆನ್ನೈನಲ್ಲಿ ನಡೆದ 2ನೇ ಅನೌಪಚಾರಿಕ ಶೃಂಗಸಭೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಿನ್‌ಪಿಂಗ್, '2020ರಲ್ಲಿ ಚೀನಾದಲ್ಲಿ ನಡೆಯುವ 3ನೇ ಅನೌಪಚಾರಿಕ ಶೃಂಗಸಭೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದರು. ದಿನಾಂಕ ಮತ್ತು ಸ್ಥಳವನ್ನು ಮುಂದಿನ ದಿನಗಳಲ್ಲಿ ರಾಯಭಾರಿಗಳ ಮೂಲಕ ನಿರ್ಧರಿಸಲಾಗುತ್ತದೆ' ಎಂದರು.
ವಿಶೇಷ ಪ್ರತಿನಿಧಿಗಳ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದು, ಉಭಯ ರಾಷ್ಟ್ರಗಳ ನಾಯಕರು ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡುವಿಕೆ ಮತ್ತು ಭದ್ರತೆಯಂತಹ ಮಹತ್ವದ ವಿಚಾರಗಳನ್ನು ಪುನರುಚ್ಚರಿಸಿದ್ದಾರೆ. ಡಬ್ಲ್ಯುಟಿಒ, ಬ್ರಿಕ್ಸ್ ಮತ್ತು ಆರ್‌ಸಿಇಪಿ ಸೇರಿದಂತೆ ಬಹುಪಕ್ಷೀಯ ವಿಷಯಗಳ ಬಗ್ಗೆ ಪರಸ್ಪರರು ಅಭಿಪ್ರಾಯಗಳನ್ನು ಹಂಚಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರು 2020ರ ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವಂತೆ ಬ್ರೆಜಿಲ್ ಅಧ್ಯಕ್ಷರನ್ನು ಆಹ್ವಾನಿಸಿದ್ದಾರೆ. ಅಧ್ಯಕ್ಷ ಜೈರ್ ಮೆಸಿಯಾಸ್ ಬೊಲ್ಸಾನರೋ ಅವರು ಭಾರತದ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವುದಾಗಿ ಸಂತೋಷದಿಂದ ಒಪ್ಪಿಕೊಂಡಿದ್ದಾರೆ.