ಮ್ಯಾನ್ಮಾರ್:ಮ್ಯಾನ್ಮಾರ್‌ನ ಆಡಳಿತಾರೂಢ ಪಕ್ಷದ ಕೌನ್ಸಿಲರ್ ಆಂಗ್ ಸಾನ್ ಸೂಕಿ ಸೇರಿದಂತೆ ಹಲವು ನಾಯಕರನ್ನು ಅಲ್ಲಿನ ಸೇನೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ಗೃಹಬಂಧನದಲ್ಲಿ ಇರಿಸಿದೆ. ಇದರ ಜೊತೆಗೆ, ದೇಶದಲ್ಲಿ ಒಂದು ವರ್ಷ ತುರ್ತುಪರಿಸ್ಥಿತಿ ಘೋಷಣೆ ಮಾಡಿದೆ.
ಆಂಗ್ ಸಾನ್ ಸೂಕಿ ಅವರನ್ನು ಮಿಲಿಟರಿ ವಶಕ್ಕೆ ಪಡೆದಿದ್ದು ನಿಜ ಎಂದು ಅವರ ಪಕ್ಷದ ವಕ್ತಾರರು ಸೋಮವಾರ ಮುಂಜಾನೆ ತಿಳಿಸಿದ್ದಾರೆ.
ನಾಗರಿಕ ಸರ್ಕಾರ ಮತ್ತು ಪ್ರಬಲ ಮಿಲಿಟರಿ ನಡುವೆ ಕಳೆದ ಹಲವು ದಿನಗಳಿಂದ ಸಂಘರ್ಷ ನಡೆಯುತ್ತಿತ್ತು.
ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ನಾಯಕಿ ಸೂಕಿ ಅವರನ್ನು ರಾಜಧಾನಿ ನೇಪಿಥಾವ್ ನಗರದಲ್ಲಿ ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಸೂಕಿ ಮ್ಯಾನ್ಮಾರ್ ದೇಶದ ಅತ್ಯಂತ ಪ್ರಬಲ ರಾಜಕಾರಣಿ. ಮಿಲಿಟರಿ ಆಡಳಿತದ ವಿರುದ್ಧ ದಶಕಗಳ ಅಹಿಂಸಾತ್ಮಕ ಹೋರಾಟವನ್ನು ನಡೆಸಿದ ನಂತರ ಅವರು ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದರು.
ಕಳೆದ ವರ್ಷ ನಡೆದ ಚುನಾವಣೆಯ ನಂತರ ಸಂಸತ್ತಿನ ಮೊದಲ ಅಧಿವೇಶನಕ್ಕಾಗಿ ಮ್ಯಾನ್ಮಾರ್ ಸಂಸತ್ ಸದಸ್ಯರು ಸೋಮವಾರ ರಾಜಧಾನಿ ನೇಪಿಥಾವ್‌ನಲ್ಲಿ ಸಭೆ ಸೇರಬೇಕಿತ್ತು. ಆದರೆ ಇದಕ್ಕೆ ಮಿಲಿಟರಿ ವಿರೋಧ ವ್ಯಕ್ತಪಡಿಸಿತ್ತು.
ಸದ್ಯ ನೇಪಿಥಾವ್‌ನ ಎಲ್ಲಾ ಸಂವಹನ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಫೋನ್ ಮತ್ತು ಇಂಟರ್ನೆಟ್ ಸಂಪರ್ಕಗಳು ಕಡಿತಗೊಂಡಿದೆ. ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಾರ್ಟಿಯ ನಾಯಕರು, ಕಾರ್ಯಕರ್ತರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ.
ಸಂಸತ್ತಿನ ಉಭಯ ಸದನಗಳ ಒಟ್ಟು 476 ಸ್ಥಾನಗಳ ಪೈಕಿ, 396 ಸ್ಥಾನಗಳನ್ನು ಸೂಕಿ ನಾಯಕತ್ವದ ಪಕ್ಷ ಪಡೆದಿದೆ. ಬಹುಮತ ಪಡೆದು ಆಡಳಿತದ ಗದ್ದುಗೆ ಪಡೆಯಲು 322 ಸ್ಥಾನಗಳು ಬೇಕು. ಆದರೆ 2008 ರಲ್ಲಿ ಸೇನೆಯು ರಚಿಸಿದ ಸಂವಿಧಾನವು ಮಿಲಿಟರಿಗೆ ಒಟ್ಟು ಸ್ಥಾನಗಳ ಪೈಕಿ ಶೇ 25 ಸ್ಥಾನಗಳನ್ನು ನೀಡುತ್ತದೆ. ಈ ಸಾಂವಿಧಾನಿಕ ಬದಲಾವಣೆಯಿಂದ ಮಿಲಿಟರಿ ನೇಮಕಾತಿಗಳಿಗಾಗಿ ಹಲವು ಪ್ರಮುಖ ಮಂತ್ರಿಸ್ಥಾನಗಳನ್ನು ಸಹ ಸೇನೆಗೆ ಅಲ್ಲಿ ಕಾಯ್ದಿರಿಸಲಾಗುತ್ತದೆ.
ಇದನ್ನೂಓದಿ: ಐದು ಸಾವಿರ ಕ್ಯಾಸೆಟ್ ಸಂಗ್ರಹಿಸಿದ 'ನಾದಪ್ರೇಮಿ'