ಫರೀದ್‌ಕೋಟ್ (ಪಂಜಾಬ್): ಹಿಂದಿ ಖಾಸಗಿ ಟಿವಿ ಚಾನೆಲ್ನ ಜನಪ್ರಿಯ 'ಸರಿಗಮಪ ಲಿಟಲ್ ಚಾಂಪ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಂಜಾಬ್ನ ಫರೀದ್‌ಕೋಟ್ ಜಿಲ್ಲೆಯ ಬಾಲಕಿಯ ಯಕೃತ್ತು(ಲಿವರ್) ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈಕೆಯ ಚಿಕಿತ್ಸೆಗಾಗಿ ಕುಟುಂಬದವರು ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ, ಸಂಕಷ್ಟದಲ್ಲಿ ಸಂದರ್ಭದಲ್ಲಿ ಬಾಲಕಿಯ ಗಾಯನ ಮೆಚ್ಚಿ ಬಾಲಿವುಡ್ ಗಾಯಕ ಹಿಮೇಶ್ ರೇಶಮಿಯಾ ನೀಡಿದ್ದ ಕೈ ಗಡಿಯಾರವನ್ನೇ ಹರಾಜು ಮಾಡಲು ಮುಂದಾಗಿದ್ದಾರೆ.
2017ರಲ್ಲಿ ಜನಪ್ರಿಯ ಸರಿಗಮಪ ಲಿಟಲ್ ಚಾಂಪ್‌ನಲ್ಲಿ ಬಾಷನಂದಿ ಗ್ರಾಮದ ನವಪ್ರೀತ್ ಕೌರ್ ಪಾಲ್ಗೊಂಡಿದ್ದಳು. ಈಗ ಈಕೆ ಲಿವರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಬಟಿಂಡಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಗಳ ಪ್ರಾಣ ಉಳಿಸಿಕೊಳ್ಳಲು ತಂದೆ ಗುರುದೀಪ್ ಸಿಂಗ್ ಮತ್ತು ಕುಟುಂಬ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದರೂ, ಚಿಕಿತ್ಸೆಗೆ ಹಣ ಸಾಲುತ್ತಿಲ್ಲ. ಆದ್ದರಿಂದ ಹಿಮೇಶ್ ರೇಶಮಿಯಾ ಕೊಟ್ಟ ಕೈ ಗಡಿಯಾರವನ್ನೇ ಹರಾಜಿಗಿಡಲು ತೀರ್ಮಾನಿಸಿದ್ದೇವೆ ಎಂದು ತಂದೆ ಹೇಳಿದ್ದಾರೆ.