ಸಿನಿಮಾ ಮೇಲಿನ ವ್ಯಾಮೋಹ ಎಂತಹವರನ್ನು ಕೂಡ, ನಟ ಹಾಗೂ ನಿರ್ದೇಶಕರನ್ನಾಗಿ ಮಾಡುತ್ತದೆ. ಈ ಮಾತಿಗೆ ಪೂರಕವಾಗಿ ಬಿಎಂಟಿಸಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ನಂದನ್ ಪ್ರಭು ಎಂಬುವರು ಸಿನಿಮಾಕ್ಕಾಗಿ ತಮ್ಮ ವೃತ್ತಿಯನ್ನ ತೊರೆದಿದ್ದಾರೆ. 'ಪ್ರೀತಿಯ ಲೋಕ' ಹಾಗೂ 'ಲವ್ ಈಸ್ ಪಾಯ್ಸನ್' ಎಂಬ ಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕ ಡೈರೆಕ್ಟರ್ ಆಗಿದ್ದಾರೆ. ಇದೀಗ ಏಳು ವರ್ಷಗಳ ಬಳಿಕ ನಂದನ್ ಪ್ರಭು 'ಓರಿಯೋ' ಎಂಬ ಹೊಸ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ.
ಯುವ ಪ್ರತಿಭೆಗಳಾದ ನಿತಿನ್‌ಗೌಡ ಹಾಗೂ ಶುಭಿ ಮುಖ್ಯ ಭೂಮಿಕೆಯಲ್ಲಿರುವ 'ಓರಿಯೋ ಸಿನಿಮಾ' ಹಾರರ್ ಜತೆಗೆ ಪರಿಸರ ಕಾಳಜಿಯ ಬಗ್ಗೆ ಕಥೆಯನ್ನ ಒಳಗೊಂಡಿದೆ. ಈ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ನಂದನ್ ಪ್ರಭು, ಓರಿಯೋ ಪದಕ್ಕೆ ಒಂದೊಂದು ದೇಶದಲ್ಲಿ ಒಂದೊಂದು ಅರ್ಥವಿದೆ. ನಮ್ಮ ಚಿತ್ರಕ್ಕೆ ಇದೇ ಶೀರ್ಷಿಕೆ ಇಟ್ಟಿರುವ ಕಾರಣವೇನು? ಎಂದು ಚಿತ್ರ ನೋಡಿದಾಗ ಖಂಡಿತಾ ಗೊತ್ತಾಗುತ್ತದೆ ಎಂದಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಶೂಟಿಂಗ್ ಆರಂಭಿಸಿ ಸಕಲೇಶಪುರ, ಮಡಿಕೇರಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಈಗಾಗಲೇ 2 ಹಾಡು ಹಾಗೂ 2 ಸಾಹಸ ದೃಶ್ಯ ಶೂಟಿಂಗ್ ಮುಗಿಸಿದ್ದೇವೆ. ಒಂದು ಹಾಡಿನ ಚಿತ್ರೀಕರಣ ಮಾತ್ರವೇ ಬಾಕಿಯಿದೆ. 'ತುಂಬಾ ಹಿಂದೆ ನಾನು, ಎಪಿಜೆ ಅಬ್ದುಲ್ ಕಲಾಂ (ರಾಷ್ಟಪತಿ ಆಗುವುದಕ್ಕಿಂತ ಮುಂಚೆ) ಅವರ ಕಾರು ಚಾಲಕನಾಗಿದ್ದೆ. ಅವರು ನನ್ನೊಂದಿಗೆ ಮಾತಾಡುವಾಗ ಒಂದಷ್ಟು ವಿಷಯಗಳನ್ನು ಹೇಳುತ್ತಿದ್ದರು. ಆ ಮಾತುಗಳೇ ನಾನು ಈ ಚಿತ್ರ ಮಾಡಲು ಸ್ಪೂರ್ತಿ' ಎಂದರು.