ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡದ ಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್' ಪ್ರೇಕ್ಷಕರಿಗೆ ಹೆಚ್ಚು ಮನರಂಜನೆ ನೀಡುತ್ತಿದೆ. ದಿನಕ್ಕೊಂದು ಟಾಸ್ಕ್ಗಳ ಜೊತೆ ಸ್ಪರ್ಧಿಗಳ ನಡುವಿನ ಸ್ಪರ್ಧೆ ಕೂಡ ಹೆಚ್ಚಾಗುತ್ತಿದೆ. ಈ ವಾರ ದೊಡ್ಮನೆಯಲ್ಲಿ ರಕ್ಕಸರು ಮತ್ತು ಗಂಧರ್ವರ ನಡುವೆ ಗುದ್ದಾಟ ಜೋರಾಗಿತ್ತು. ಆಟವನ್ನು ವೈಯಕ್ತಿಕವಾಗಿ ತೆಗೆದುಕೊಂಡ ಸ್ಪರ್ಧಿಗಳು, ದೈಹಿಕವಾಗಿ ಗಾಯಗೊಳ್ಳುವ ಅತಿರೇಕಕ್ಕೂ ಹೋಯಿತು.
ಪರಿಣಾಮವಾಗಿ ಸಂಗೀತಾ ಶೃಂಗೇರಿ ಮತ್ತು ಡ್ರೋನ್ ಪ್ರತಾಪ್ ಇಬ್ಬರೂ ಆಸ್ಪತ್ರೆ ಸೇರಿಕೊಳ್ಳುವಂತಾಗಿತ್ತು. ಅದೆಲ್ಲದರ ವಿಚಾರವಾಗಿ ಈ ವಾರದ 'ಕಿಚ್ಚನ ಪಂಚಾಯಿತಿ'ಯಲ್ಲಿ ಸುಂಟರಗಾಳಿಯೇ ಏಳುವ ಸಂಭವವಿದೆ. ಇದರ ಸೂಚನೆ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ 'ವಾರದ ಕತೆ ಕಿಚ್ಚನ ಜೊತೆ' ಪ್ರೋಮೊದಲ್ಲಿ ಸಿಕ್ಕಿದೆ. 'ಕಿಚ್ಚನ ಪಂಚಾಯ್ತಿಯಲ್ಲಿ ಸುಂಟರಗಾಳಿ' ಎಂಬ ಕ್ಯಾಪ್ಶನ್ನೊಂದಿಗೆ ಈ ಬಾರಿಯ ಪ್ರೋಮೋ ಹೊರಬಿದ್ದಿದೆ.
ಗಂಧರ್ವರು ರಕ್ಕಸರಾಗದ್ದಕ್ಕೆ, ರಕ್ಕಸರು ಕಟುಕರಾಗಿ ಬದಲಾಗಿದ್ದಕ್ಕೆ, ವಿನಂತಿಗಳು ಅಪ್ಪಣೆಗಳಾಗಿ ಬದಲಾಗಿದ್ದಕ್ಕೆ ಕಿಚ್ಚ ಸುದೀಪ್, ‘ಪಂಚಾಯಿತಿ’ಯಲ್ಲಿ ಚರ್ಚೆ ನಡೆಸಿದ್ದಾರೆ. ಎರಡು ದಿನಗಳ ಹಿಂದೆಯೇ ಟಾಸ್ಕ್ನಲ್ಲಿ ಗಾಯಗೊಂಡು ತುರ್ತಾಗಿ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಆಸ್ಪತ್ರೆಗೆ ಸೇರಿದ್ದರು. ಅವರ ಬಗ್ಗೆ ಮನೆಯವರಿಗೆ ಸುಳಿವೇ ಇರಲಿಲ್ಲ. ಆದರೆ ಇಂದು ಕಿಚ್ಚನ ಪಂಚಾಯಿತಿಗೆಂದು ಎಲ್ಲರೂ ರೆಡಿಯಾಗಿ ಕೂತಿದ್ದಾಗ ಬಿಗ್ ಬಾಸ್ ಮನೆಯ ಬಾಗಿಲು ತೆರೆದುಕೊಂಡಿದೆ.