ಕಳೆದ ವಾರದ ಕೋಲಾಹಲಗಳು, ಜಗಳಗಳು, ಟಾಸ್ಕ್ ಎಂಬುದು ವಿಕೋಪಕ್ಕೆ ತಿರುಗಿಕೊಂಡ ವಿಪರ್ಯಾಸಗಳು, ವಾರಾಂತ್ಯದ ಎಪಿಸೋಡ್‌ನಲ್ಲಿ ಕಿಚ್ಚ ತೆಗೆದುಕೊಂಡ ಕ್ಲಾಸ್ ಎಲ್ಲವೂ ಮುಗಿದು ಬಿಗ್ ಬಾಸ್ ಮನೆಯೀಗ ಹೊಸ ವಾರದ ಹೊಸ ದಿನಕ್ಕೆ ಕಾಲಿರಿಸಿದೆ. ಈ ವಾರದ ಮೊದಲ ದಿನ ಹೇಗಿತ್ತು? ಅದರ ಸೂಚನೆ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಿಕ್ಕಿದೆ.
ಹೊಸ ವಾರದ ಮೊದಲ ದಿನ ಭಾವಪೂರ್ಣವಾಗಿತ್ತು. ಮನೆಯ ಸದಸ್ಯರೆಲ್ಲರೂ ಈ ಭಾವದ ಮಳೆಯಲ್ಲಿ ಭರಪೂರ ನೆನೆದಿದ್ದಾರೆ. ಇಂಥದ್ದೊಂದು ಎಮೋಷನಲ್ ಓಪನ್‌ಅಪ್ ಆಗುವ ಅವಕಾಶವನ್ನು ಕಲ್ಪಿಸಿದ್ದು ಬಿಗ್ ಬಾಸ್. ಮನೆಯ ಪ್ರತಿ ಸದಸ್ಯರನ್ನು ಕನ್‌ಪೆಷನ್ ರೂಮಿಗೆ ಕರೆದು ಅವರ ಮನದಾಳದ ಮಾತುಗಳಿಗೆ ಕಿವಿಯಾಗಿದ್ದಾರೆ.
ಒಂಟಿಯಾಗಿ ಕನ್‌ಪೆಷನ್ ರೂಮಿನಲ್ಲಿ ಕೂತ ಸ್ಪರ್ಧಿಗಳು ತಮ್ಮ ಮನಸಲ್ಲಿ ಮುಚ್ಚಿಕೊಂಡಿದ್ದ ಹಲವು ಸಂಗತಿಗಳನ್ನು, ಕಾಡುವ ವಿಷಯಗಳನ್ನು, ಗಾಯದ ನೋವುಗಳನ್ನು ಮನಬಿಚ್ಚಿ ಮಾತಾಡಿದ್ದಾರೆ. ಹೊರ ಜಗತ್ತಿಗೆ ಇದುವರೆಗೆ ಒರಟು, ಸಂಚುಕೋರರು, ಅವಕಾಶವಾದಿ, ಚೇಲಾ, ಡಾಮಿನೆಂಟ್, ಉದ್ಧಟ, ನೆಗೆಟಿವ್, ಕುತಂತ್ರಿ, ಮಾತುಗಾರರು ಹೀಗೆ ಹತ್ತು ಹಲವು ಲೇಬಲ್‌ಗಳನ್ನು ಮನೆಯ ಉಳಿದ ಸದಸ್ಯರಿಂದಲೇ ಪಡೆದುಕೊಂಡು ಓಡಾಡುತ್ತಿದ್ದ ಸ್ಪರ್ಧಿಗಳು, ತಮ್ಮ ಎಲ್ಲ ಲೇಬಲ್‌ಗಳನ್ನೂ ಮರೆತು ಬಿಗ್ ಬಾಸ್ ಜೊತೆಗೆ ಭಾವುಕವಾಗಿ ಮಾತನಾಡಿದ್ದಾರೆ. ಇದರಿಂದ ಅವರ ವ್ಯಕ್ತಿತ್ವದ ಭಿನ್ನ ಮಗ್ಗಲುಗಳು ತೆರೆದುಕೊಂಡಿವೆ. ಅವು ಹೃದಯಸ್ಪರ್ಶಿಯೂ, ಮನಕರಗುವಂತೆಯೂ ಇದೆ.
'ತಂಗಿ ಡೆಲಿವರಿ ಡೇಟ್ ಇತ್ತು. ಏನಾಯ್ತು ಗೊತ್ತಾಗ್ತಿಲ್ಲ' ಎಂದು ಕಾರ್ತಿಕ್ ಕಳವಳಗೊಂಡಿದ್ದರೆ, ತನಿಷಾ, 'ತುಂಬಾ ಲೋನ್ಲಿ ಫೀಲ್ ಆಗುತ್ತಿದೆ. ನಾನು ಮಾತಾಡಿದ್ದು ಇಲ್ಲಿ ಯಾರಿಗೂ ಇಷ್ಟ ಆಗ್ತಿಲ್ಲ' ಎಂದು ಕಣ್ಣೀರಾಗಿದ್ದಾರೆ. 'ಸ್ಕೂಲಲ್ಲಿ ಇರ್ಬೇಕಿದ್ದರೆ, ಕಾಲೇಜಿನಲ್ಲಿ ಇರ್ಬೇಕಿದ್ದರೆ ನನ್ನ ಕಾರ್ನರ್ ಮಾಡಿದ್ದೇ ಜಾಸ್ತಿ. ಇಲ್ಲೂ ಸೇಮ್ ಸಿಚುವೇಷನ್ ಕ್ರಿಯೇಟ್ ಆಗ್ತಿದೆ' ಎಂದು ತಮ್ಮ ಮನದೊಳಗಿನ ನೋವನ್ನು ಸಂಗೀತಾ ಹಂಚಿಕೊಂಡಿದ್ದರೆ, 'ಪ್ರತಾಪ್ ಕಪ್ಪು ಕನ್ನಡಕ ತೊಟ್ಟು ಓಡಾಡುತ್ತಿರುವುದನ್ನು ನೋಡಲು ಕಷ್ಟವಾಗುತ್ತಿದೆ. ಎಲ್ಲೋ, ನಾನೇ ಅದಕ್ಕೆ ಕಾರಣವಾಗಿಬಿಟ್ನಾ ಅನಿಸುತ್ತಿದೆ' ಎಂದು ವರ್ತೂರು ಸಂತೋಷ್ ತಳಮಳಿಸಿದ್ದಾರೆ.
ಒಟ್ಟಾರೆ ಈ ವಾರದ ಆರಂಭ ಭಾವಪೂರ್ಣವಾಗಿದೆ. ಮನದೊಳಗೆ ಬಚ್ಚಿಟ್ಟುಕೊಂಡಿದ್ದ ಹಲವು ನೋವುಗಳನ್ನು, ಅವಮಾನ, ಹಿಂಜರಿಕೆಗಳನ್ನು ಹಂಚಿಕೊಂಡಿರುವ ಸದಸ್ಯರು ಹಗುರಾಗಿದ್ದಾರೆ. ನೋವನ್ನು ಹಂಚಿಕೊಂಡ ಮನುಷ್ಯ ಹೊಸತಾಗುತ್ತಾನಂತೆ. ಹಾಗಾದರೆ ಈ ವಾರದ ಬಿಗ್ ಬಾಸ್‌ನಲ್ಲಿ ಹೊಸದೊಂದು ಪ್ರಭೆ ಕಾಣಿಸಿಕೊಳ್ಳಲಿದೆಯಾ? ಹೊಸ ಉತ್ಸಾಹದೊಂದಿಗೆ, ಹೊಸ ಹೊಸ ಕ್ರಿಯೇಟಿವ್ ಯೋಚನೆಗಳೊಂದಿಗೆ ಸದಸ್ಯರು ಆಡಲಿದ್ದಾರಾ? ಈ ನಿರೀಕ್ಷೆಯಂತೂ ಎಲ್ಲರಲ್ಲೂ ಇದ್ದೇ ಇದೆ. ಅದು ನಿಜವಾಗುತ್ತದೆಯೇ ಎಂಬುದನ್ನು ಬಿಗ್ ಬಾಸ್ ಮನೆಯ ಸದಸ್ಯರ ನಡವಳಿಕೆಯೇ ನಿರ್ಧರಿಸುತ್ತದೆ.
ಬಿಗ್ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ. ಪ್ರತಿದಿನದ ಎಪಿಸೋಡ್‌ಗಳು ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.
ಇದನ್ನೂ ಓದಿ:ಮುನಿಸು ಮರೆತು ಒಂದಾದ 'ಬಿಗ್ ಬಾಸ್' ಸ್ಪರ್ಧಿಗಳು; ಗೆಳೆಯರ ನಡುವೆ ಅರಳಿತು ಸ್ನೇಹದ ಹೂವು