ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 10' ದಿನಕ್ಕೊಂದು ತಿರುವು ಪಡೆಯುತ್ತಿದೆ. ಮನರಂಜನೆ ನೀಡುವುದರ ಜೊತೆಗೆ ಸ್ಪರ್ಧಿಗಳ ವೈಯಕ್ತಿಕ ವಿಚಾರಗಳು ಬೆಳಕಿಗೆ ಬರುತ್ತಿವೆ. ಕೆಲ ದಿನಗಳ ಹಿಂದಷ್ಟೇ ವರ್ತೂರು ಸಂತೋಷ್ ಅವರು ಹುಲಿ ಉಗುರು ಪೆಂಡೆಂಟ್ ವಿಚಾರವಾಗಿ ಜೈಲಿಗೆ ಹೋಗಿ ವಾಪಸ್ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಕಳೆದ ವಾರದ ವೀಕೆಂಡ್ ವಿತ್ ಸುದೀಪ್ ಸಂಚಿಕೆಯಲ್ಲಿ ಸೇಫ್ ಆದ್ರೂ ಮನೆಯಿಂದ ಹೊರಹೋಗುತ್ತೇನೆ ಎಂದು ಹೇಳಿದ್ದು, ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಂದು ವಿವಾದದಲ್ಲಿ ವರ್ತೂರು ಸಿಲುಕಿಕೊಂಡಿದ್ದಾರೆ.
ಕನ್ನಡದ ಬಿಗ್ ಬಾಸ್ ಶೋ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇದೆ. ಅದರಲ್ಲೂ ಹಳ್ಳಿಕಾರ್ ಖ್ಯಾತಿಯ ವರ್ತೂರು ಸಂತೋಷ್ ಅವರ ಹೆಸರು ಮನೆಯ ಒಳಗೂ, ಹೊರಗೂ ಹೆಚ್ಚು ಕೇಳಿ ಬರುತ್ತಿದೆ. ಕಳೆದ ತಿಂಗಳು ಹುಲಿ ಉಗುರಿನ ಡಾಲರ್ ಧರಿಸಿದ ಆರೋಪದಲ್ಲಿ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಬಂಧಿಸಲಾಗಿತ್ತು. ಬಂಧನಕ್ಕೊಳಗಾಗಿ 5 ದಿನಗಳ ನಂತರ ಅಂದರೆ ಅಕ್ಟೋಬರ್ 27ರಂದು ಅವರನ್ನು ಬಿಡುಗಡೆ ಮಾಡಲಾಗಿತ್ತು. ಆ ನಂತರ ಮತ್ತೆ ಬಿಗ್ ಬಾಸ್ ಮನೆಗೆ ಅವರು ರೀ ಎಂಟ್ರಿ ಕೊಟ್ಟಿದ್ದರು.
ಅಲ್ಲಿ ಸ್ಪರ್ಧಿಗಳೊಂದಿಗೆ ಚೆನ್ನಾಗಿಯೇ ಇದ್ದ ವರ್ತೂರು ಸಂತೋಷ್ ಅವರು ಕಳೆದ ವಾರ ನಾಮಿನೇಟ್ ಆಗಿದ್ದರು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅವರು 34 ಲಕ್ಷದ 15 ಸಾವಿರದ 475 ಮತಗಳನ್ನು ಪಡೆದು ಸೇಫ್ ಆಗಿದ್ದರು. ಆದರೆ, ನಾನು ಮನೆಯಿಂದ ಹೊರ ಹೋಗಲು ಇಚ್ಛಿಸುತ್ತೇನೆಂದು ಹೇಳಿ ಎಲ್ಲರಿಗೂ ಶಾಕ್ ನೀಡಿದ್ದರು. ಹೊರಗಡೆ ನಡೆದಿರುವ ಘಟನೆಗಳನ್ನು ಮರೆತು ಇಲ್ಲಿ ಆಟವಾಡಲು ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದರು. ಇದರಿಂದ ಮನೆ ಮಂದಿ, ಸುದೀಪ್ ಸೇರಿದಂತೆ ಅಭಿಮಾನಿಗಳು ಅಸಮಾಧಾನಗೊಂಡಿದ್ದರು.