ಲಕ್ಷ್ಮಣ್ ಉಟೇಕರ್ ನಿರ್ದೇಶನದ ಜರಾ ಹಟ್ಕೆ ಜರಾ ಬಚ್ಕೆ (Zara Hatke Zara Bachke) ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ತೆರೆಕಂಡು 25 ದಿನಗಳಾದರೂ ಪ್ರತಿದಿನ ಕನಿಷ್ಠ ಒಂದು ಕೋಟಿಯಾದರೂ ಗಳಿಸುವಲ್ಲಿ ಯಶಸ್ವಿ ಆಗಿದೆ.
ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಜರಾ ಹಟ್ಕೆ ಜರಾ ಬಚ್ಕೆ ಚಿತ್ರವು ದೇಶೀಯ ಮಾರುಕಟ್ಟೆಯಲ್ಲಿ ಈವರೆಗೆ 80 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹಿಸಿದೆ. ನಾಲ್ಕನೇ ಸೋಮವಾರ 1.25 ಕೋಟಿ ರೂಪಾಯಿ ಗಳಿಸಿದೆ. ಪ್ರತಿದಿನ ಕಲೆಕ್ಷನ್ ಸಂಖ್ಯೆ ಕೋಟಿ ಗಡಿ ದಾಟಿರುತ್ತದೆ. ಒಟ್ಟು ಕಲೆಕ್ಷನ್ 80.01 ಕೋಟಿ ರೂ. ಆಗಿದ್ದು, ಚಿತ್ರವು 87-88 ಕೋಟಿ ರೂಪಾಯಿ ಗಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಅದಾಗ್ಯೂ, 40 ಕೋಟಿ ರೂ. ಬಜೆಟ್ನಲ್ಲಿ ನಿರ್ಮಿಸಲಾಗಿರುವ ಈ ಸಿನಿಮಾ 100 ಕೋಟಿ ರೂ.ನ ಕ್ಲಬ್ ಸೇರಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
40 ಕೋಟಿ ಬಜೆಟ್ನಲ್ಲಿ ನಿರ್ಮಾಣ ಆಗಿರುವ ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ಜೂನ್ 2ರಂದು ತೆರೆಕಂಡಿದೆ. ರೊಮ್ಯಾಂಟಿಕ್ ಕಾಮಿಡಿ, ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಹಿನ್ನೆಲೆ ಇತ್ತೀಚೆಗಷ್ಟೇ ನಟಿ ಸಾರಾ ಅಲಿಖಾನ್ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಇಂದೋರ್ನ ಖಜ್ರಾನ ಗಣೇಶ ದೇವಾಲಯಕ್ಕೆ ಮೊದಲು ಭೇಟಿ ಕೊಟ್ಟು ನಂತರ ಉಜ್ಜಯಿನಿಯ ಕಾಲ ಭೈರವ ಮತ್ತು ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಈ ಸಿನಿಮಾ ಇಂದೋರ್ನಲ್ಲೇ ಚಿತ್ರೀಕರಣಗೊಂಡಿರುವುದು.
ಮುಂದಿನ ಸಿನಿಮಾಗಳನ್ನು ಗಮನಿಸುವುದಾದರೆ, ಸಾರಾ ಅಲಿ ಖಾನ್ ಅವರು ಏ ವತನ್ ಮೇರೆ ವತನ್, ಮರ್ಡರ್ ಮುಬಾರಕ್ ಮತ್ತು ಮೆಟ್ರೋ ಇನ್ ದಿನೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ವಿಕ್ಕಿ ಕೌಶಲ್ ಅವರು ಮೇಘನಾ ಗುಲ್ಜಾರ್ ಅವರ ಸ್ಯಾಮ್ ಬಹದ್ದೂರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.