ಕನ್ನಡ ಚಿತ್ರರಂಗದ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಆರಂಭವಾಗಿ ಎರಡು ವಾರಗಳು ಕಳೆದಿವೆ. ಈ ಶೋಗೆ ಈಗಾಗಲೇ ಇಬ್ಬರು ಸಾಧಕರು ಬಂದು ತಮ್ಮ ಸಾಧನೆಯ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಈ ವಾರ ಬರಲಿರುವ ಮೂರನೇ ಸಾಧಕರ ಬಗ್ಗೆ ಅಭಿಮಾನಿಗಳ ಕುತೂಹಲ ವ್ಯಕ್ತಪಡಿಸಿದ್ದರು. ಆದ್ರೆ ಈ ವಾರ ಒಬ್ಬರಲ್ಲ, ಇಬ್ಬರು ಸಾಧಕರು ಬರಲಿದ್ದಾರೆ.
ಮೂರನೇ ಅಥಿಯಾಗಿ ವಿಶೇಷ ವ್ಯಕ್ತಿ ಬರಲಿದ್ದಾರೆಂದು ಕಾರ್ಯಕ್ರಮದ ನಿರೂಪಕ ರಮೇಶ್ ಅರವಿಂದ್ ತಿಳಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬ್ಲರ್ ಫೋಟೋ ಹಂಚಿಕೊಂಡು ಯಾರೆಂದು ಊಹಿಸಿ? ಎಂದು ಈ ಶೋನ ತಂಡ ಪ್ರೇಕ್ಷಕರಲ್ಲಿ ಪ್ರಶ್ನಿಸಿತ್ತು. ಈ ಹಿನ್ನೆಲೆ ಮೂರನೇ ಅತಿಥಿ ಬಗ್ಗೆ ಸಹಜವಾಗಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ. ಜೀ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಮುಂದಿನ ಸಂಚಿಕೆಯ ಪ್ರೋಮೋ ರಿಲೀಸ್ ಮಾಡಿದೆ.
'ವೀಕೆಂಡ್ ವಿತ್ ರಮೇಶ್' ಶೋನ ಮೂರನೇ ವಾರದ ಕಾರ್ಯಕ್ರಮದಲ್ಲಿ ಇಬ್ಬರು ಸಾಧಕರು ಬರಲಿದ್ದಾರೆ ಎಂದು ಜೀ ವಾಹಿನಿ ತಿಳಿಸಿದೆ. ಪ್ರೋಮೋ ಶೇರ್ ಮಾಡಿರುವ ಚಾನಲ್, ''ಲಕ್ಷಾಂತರ ಹೃದಯಗಳಿಗೆ ಮಿಡಿದ ಡಾ. ಸಿ.ಎನ್. ಮಂಜುನಾಥ್ ಮತ್ತು ಲಕ್ಷಾಂತರ ಹೃದಯಗಳನ್ನು ಗೆದ್ದ ದತ್ತಣ್ಣ ಈ ವೀಕೆಂಡ್‌ನ ಅತಿಥಿಗಳು'' ಎಂದು ಬರೆದುಕೊಂಡಿದೆ.
ಹೌದು, ಈ ವಾರಾಂತ್ಯ ಜಯದೇವ ಸಂಸ್ಥೆಯ ಹೃದಯ ತಜ್ಞ ಮಂಜುನಾಥ್ ಮತ್ತು ನಟ ದತ್ತಣ್ಣ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿ, ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟ ದತ್ತಣ್ಣ ಅವರ ಪಾತ್ರ ಮಹತ್ವದ್ದು. ಅದೆಷ್ಟೋ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದೇ ರೀತಿ ಆರೋಗ್ಯ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಸಿ.ಎನ್. ಮಂಜುನಾಥ್ ಅವರ ಪಾತ್ರ ಕೂಡ ಬಹುಮುಖ್ಯ. ಅದೆಷ್ಟೋ ರೋಗಿಗಳಿಗೆ ಚಿಕಿತ್ಸೆ ನೀಡಿದವರು. ಆರೋಗ್ಯ ಕಾಳಜಿ, ವಿಶೇಷವಾಗಿ ಹೃದಯಾಘಾತ ತಡೆಯುವ ಬಗ್ಗೆ ಮಾತನಾಡಲಿದ್ದಾರೆ ಎಂದು ಪ್ರೇಕ್ಷಕರು ಅಂದಾಜಿಸಿದ್ದಾರೆ.