ಪರಭಾಷೆಗಳಿಂದ ಕನ್ನಡಕ್ಕೆ ಡಬ್ ಆಗಿ ಬರುವ ಚಿತ್ರಗಳಲ್ಲಿ ಒಂದು ಹೆಸರು ಬಹಳ ಕಾಮನ್ ಆಗಿರುತ್ತದೆ. ಅದು ವರದರಾಜ್ ಚಿಕ್ಕಬಳ್ಳಾಪುರ. 2019ರಲ್ಲಿ ಬಿಡುಗಡೆಯಾದ 'ರಂಗಸ್ಥಳ' ಚಿತ್ರಕ್ಕೆ ಹಾಡುಗಳನ್ನು ಬರೆಯುವ ಮೂಲಕ ಚಿತ್ರರಂಗಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟ ಅವರು, ನಾಲ್ಕು ವರ್ಷಗಳ ಅಂತರದಲ್ಲಿ 96 ಚಿತ್ರಗಳಿಗೆ ಸಂಭಾಷಣೆಕಾರರಾಗಿ, ಗೀತರಚನೆಕಾರರಾಗಿ ಕೆಲಸ ಮಾಡಿದ್ದಾರೆ.
ಮೂಲತಃ ಚಿಕ್ಕಬಳ್ಳಾಪುರದವರಾದ ವರದರಾಜ್, ಬೆಂಗಳೂರಿನ ಆರ್ .ಸಿ. ಕಾಲೇಜಿನಲ್ಲಿ ಓದಿದವರು. ಬಿ.ಬಿ.ಎಂ, ಎಂ.ಬಿ.ಎ ಪದವೀಧರರು. ಚಿಕ್ಕಂದಿನಿಂದಲೂ ಕವನ, ಕಥೆಗಳನ್ನು ಬರೆಯುತ್ತಿದ್ದ ಅವರು, ಕಾಲೇಜಿನಲ್ಲಿ ತಮ್ಮದೇ ರಚನೆಯ ನಾಟಕಗಳನ್ನೂ ಆಡಿಸಿದ್ದಾರೆ. ಗಡಿ ಭಾಗದವರಾಗಿದ್ದರಿಂದ ಕನ್ನಡದ ಜೊತೆಗೆ ತೆಲುಗಿನಲ್ಲೂ ಹಿಡಿತ ಚೆನ್ನಾಗಿದೆ. ಕನ್ನಡ ಸಾಹಿತ್ಯವಲ್ಲದೆ, ತೆಲುಗು ಸಾಹಿತ್ಯವನ್ನೂ ಚೆನ್ನಾಗಿ ಓದಿ ಅರ್ಥ ಮಾಡಿಕೊಂಡಿದ್ದ ಅವರು, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 2009ರಲ್ಲಿ. ಪೂಜಾ ಗಾಂಧಿ ಅಭಿನಯದ 'ತವರಿನ ಋಣ' ಚಿತ್ರಕ್ಕಾಗಿ ಅವರು 'ಕೇಳೇ ಮೈನ' ಎಂಬ ಹಾಡನ್ನು ಬರೆದರಾದರೂ ಆ ಚಿತ್ರ ಕಾರಣಾಂತರಗಳಿಂದ ಬಿಡುಗಡೆಯಾಗಲಿಲ್ಲ.
ನಂತರ ಒಂದು ದಶಕ ಕಾಲ ನೂರಾರು ಭಕ್ತಿ ಗೀತೆ, ವಿಡಿಯೋ ಸಾಂಗ್ಗಳನ್ನು ರಚಿಸುವಲ್ಲಿ ತೊಡಗಿಸಿಕೊಂಡಿದ್ದರು ವರದರಾಜು. ಹೀಗಿರುವಾಗಲೇ, 2019ರಲ್ಲಿ ಡಬ್ಬಿಂಗ್ಗೆ ಮುಕ್ತ ಅವಕಾಶ ಸಿಕ್ಕಿತ್ತು. ಈ ಸಂದರ್ಭದಲ್ಲಿ ರಾಮ್ ಚರಣ್ ತೇಜ ಅಭಿನಯದ ತೆಲುಗು ಚಿತ್ರ 'ರಂಗಸ್ಥಲಂ' ಕನ್ನಡಕ್ಕೆ 'ರಂಗಸ್ಥಳ' ಎಂಬ ಹೆಸರಿನಲ್ಲಿ ಡಬ್ ಆಗಿ ಬಿಡುಗಡೆಯಾಯಿತು. ಈ ಚಿತ್ರಕ್ಕಾಗಿ ಅವರು ಬರೆದ 'ಎಂಥ ಮುದ್ದಾಗಿದಿಯೇ' 'ಗಂಗಮ್ಮ ರಂಗಮ್ಮ' ಸೇರಿದಂತೆ ಎಲ್ಲ ಹಾಡುಗಳು ಯಶಸ್ವಿಯಾದವು. ನಂತರ 'ಕಾಂಚನ 3' ಚಿತ್ರಕ್ಕೆ ಸಾಹಿತ್ಯ ಬರೆದರು. ಈ ಚಿತ್ರವೂ ಹೆಸರು ತಂದುಕೊಟ್ಟಿತು. ಮೊದಲೆರಡು ಚಿತ್ರಗಳಿಗೆ ಸಾಹಿತ್ಯ ಮಾತ್ರ ಬರೆದ ಅವರು, ಮೂರನೆಯ ಚಿತ್ರವಾದ 'ಸೈರಾ ನರಸಿಂಹ ರೆಡ್ಡಿ'ಗೆ ಹಾಡುಗಳ ಜೊತೆಗೆ ಸಂಭಾಷಣೆಗಳನ್ನೂ ರಚಿಸಿದರು. ಈ ಚಿತ್ರಗಳ ಯಶಸ್ಸಿನಿಂದ ವರದರಾಜ್ ಸಾಕಷ್ಟು ಬ್ಯುಸಿಯಾದರು.
ತೆಲುಗು, ತಮಿಳು ಮಲಯಾಳಂ ಮತ್ತು ಹಿಂದಿಯಿಂದ ಕನ್ನಡಕ್ಕೆ ಡಬ್ ಆದ 'ಮಾಸ್ಟರ್ ', 'ಗೀತ ಗೋವಿಂದಂ', 'RRR', 'ಮಗಧೀರ', 'ಬೃಂದಾವನಂ', 'ಮಿಥುನಂ', 'ವಡ ಚೆನ್ನೈ', 'ಇಮೈಕ್ಕ ನೋಡಿಗಳ್ ', 'ಕಾತುವಾಕ್ಕುಲ ರೆಂಡು ಕಾದಲ್', 'ಬೀಸ್ಟ್ ', 'ವಿಕ್ರಮ್ ', 'ಪೊನ್ನಿಯನ್ ಸೆಲ್ವನ್ 1', 'ಪಾಲಾರ್' 'ಪುಷ್ಪ' ಮುಂತಾದ ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆದ ಚಿತ್ರಗಳ ಜತೆಗೆ, ಕನ್ನಡದಿಂದ ಬೇರೆ ಭಾಷೆಗಳಿಗೆ ಡಬ್ ಆಗಿರುವ 'ಕೆಂಪೇಗೌಡ 2', 'ಪೊಗರು', 'ಕಿಸ್ ', 'ವಂಚನ' 'ರೆಮೋ', 'ಉಗ್ರಾವತಾರಂ', ' ಅನಗನಗಾ ಒಕ ಅಡವಿ ', 'ಕಬ್ಜ' ಮತ್ತು 'ಟೆರರ್ ' ಮುಂತಾದ ಚಿತ್ರಗಳಿಗೆ ವರದರಾಜು ಸಾಹಿತ್ಯ ಮತ್ತು ಸಂಭಾಷಣೆ ರಚಿಸಿದ್ದಾರೆ. ವರದರಾಜು ಬರೆದಿರುವ 'ಮಾಸ್ಟರ್ ' ಚಿತ್ರದ 'ಮನಸೇ ಕರಗದಾ ಲೋಕವೀ ಲೋಕವು', 'ಪುಷ್ಪ' ಚಿತ್ರದಲ್ಲಿ 'ಶ್ರೀವಲ್ಲಿ', 'ಸಾಮಿ ಸಾಮಿ', 'ಹೂಂ ಅಂತೀಯ ಮಾಮ ಉಹೂಂ ಅಂತಿಯಾ ಮಾಮ', 'RRR' ಚಿತ್ರದ 'ಹಳ್ಳಿನಾಟು', 'ದೋಸ್ತಿ', 'ಜನನಿ', 'ಕೊಮರಂ ಭೀಮ್ ಉಧೋ' ಮುಂತಾದ ಹಾಡುಗಳು ಜನಮನ್ನಣೆ ಜೊತೆ ಸಾಕಷ್ಟು ಯಶಸ್ವಿಯಾಗಿವೆ.