ಕನ್ನಡ ಚಿತ್ರರಂಗದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಈಗಾಗಲೇ ಸಾಕಷ್ಟು ಚಿತ್ರಗಳು ಬಂದಿವೆ. ಇದೀಗ ಪ್ರಜಾಪ್ರಭುತ್ವದ ಬಗೆಗಿನ ಕಥೆ ಆಧರಿಸಿರುವ ಪ್ರಜಾರಾಜ್ಯ ಚಿತ್ರವೊಂದು ತಯಾರಿಯಲ್ಲಿದ್ದು ಸದ್ಯದಲ್ಲೇ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ವಿಜಯ್ ಭಾರ್ಗವ್ ನಿರ್ದೇಶನ ಮಾಡುತ್ತಿದ್ದಾರೆ. ಹಿರಿಯ ನಟರಾದ ದೇವರಾಜ್, ನಾಗಾಭರಣ, ಸುಧಾರಾಣಿ, ಅಚ್ಯುತಕುಮಾರ್ ಹಾಗು ತಬಲಾನಾಣಿ ಅಭಿನಯಿಸಿದ್ದಾರೆ.
ನಿರ್ಮಾಪಕ ವರದರಾಜ್ ಮಾತನಾಡಿ, ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಸಿನಿಮಾ ನಿರ್ಮಾಣ ಮಾಡಿದ್ದೇನೆ ಎಂದರು. ಸಮಾಜದ ಕೆಲವು ವಿಷಯಗಳು ನನ್ನನ್ನು ಚಿತ್ರ ಮಾಡಲು ಪ್ರೇರೇಪಿಸಿತು. ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಉಚಿತವಾಗಿ ಸಿಗಬೇಕು. ಅದನ್ನು ಕೇಳುವ ಹಕ್ಕು ನಮಗಿದೆ. ಏಕೆಂದರೆ ನಾವು ಸರ್ಕಾರಕ್ಕೆ ತೆರಿಗೆ ಕಟ್ಟಿರುತ್ತೇವೆ. ಶಿಕ್ಷಣ ವ್ಯವಸ್ಥೆ, ಆರೋಗ್ಯ ಸಮಸ್ಯೆ ಹಾಗೂ ರೈತರ ಕಷ್ಟ-ಕಾರ್ಪಣ್ಯಗಳ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಉಪೇಂದ್ರ ಅವರ "ಉಪೇಂದ್ರ" ಚಿತ್ರ ನನಗೆ ಸ್ಪೂರ್ತಿ. ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಎಂಬ ಅಡಿಬರಹ ಚಿತ್ರಕ್ಕಿದೆ ಎಂದರು.
ಇದು ನಾಯಕಪ್ರಧಾನ ಚಿತ್ರವಲ್ಲ. ಚಿತ್ರ ನೋಡಿದ ಪ್ರೇಕ್ಷಕನಿಗೆ ಇಷ್ಟವಾಗಿ, ಆತನಿಗೆ ಹೌದು, ನಾವು ಈ ರೀತಿ ಬದಲಾಗಬೇಕು ಅನ್ನಿಸಿದರೆ ಆತನೇ ನಮ್ಮ ಚಿತ್ರದ ನಾಯಕ ಎಂದು ವರದರಾಜ್ "ಪ್ರಜಾರಾಜ್ಯ"ದ ಬಗ್ಗೆ ವಿವರ ನೀಡಿದರು.
ಬಳಿಕ ಮಾತನಾಡಿದ ಹಿರಿಯ ನಟ ನಾಗಾಭರಣ, ಸರಿಸುಮಾರು 400 ಕ್ಕೂ ಅಧಿಕ ಚಿತ್ರಗಳು ವರ್ಷದಲ್ಲಿ ಬಿಡುಗಡೆಯಾಗುತ್ತಿದೆ. ಈಗ ನೋಡುಗರಿಗೆ ಬೇಕಾದ ರೀತಿಯಲ್ಲಿ ಸಿನಿಮಾ ಮಾಡುವವರು ಹೆಚ್ಚಾಗಿದ್ದಾರೆ. ಆದರೆ ಸಾಮಾಜಿಕ ಕಳಕಳಿ ಇಟ್ಟುಕೊಂಡು ತಮಗೆ ಅನ್ನಿಸಿದ್ದನ್ನು ಸಿನಿಮಾ ಮಾಡಿರುವ ವರದರಾಜ್ ಅವರ ಧೈರ್ಯ ನಿಜಕ್ಕೂ ಮೆಚ್ಚುವಂಥದ್ದು ಎಂದು ಹೇಳಿದರು.