ಮುಂಬೈ: ಹಾಲಿವುಡ್ ವೆಬ್ ಸೀರಿಸ್‌ನಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಭರವಸೆ ನೀಡಿ 27ರ ಹರೆಯದ ನಟಿ ಕ್ರಿಸನ್ನ್ ಪೆರೇರಾ (chrisann pereira) ಅವರನ್ನು ವಂಚಿಸಿದ ಆರೋಪದ ಮೇಲೆ ಇಬ್ಬರನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳು ರವಿ ಬೋಭಾಟೆ ಮತ್ತು ಆಂಥೋನಿ ಪೌಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ನಟಿಯ ತಾಯಿ ಪ್ರಮೀಳಾ ಪರೇರಾ ಅವರಿಗೂ ಕೂಡ ಹೈದರಾಬಾದ್‌ನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ವಿಚಾರವಾಗಿಯೂ ವಂಚಿಸಿದ್ದಾರೆ ಎಂಬ ಆರೋಪವೂ ಇದೆ. 56 ವರ್ಷದ ಪ್ರಮೀಳಾ ಪರೇರಾ ಅವರು ತಮ್ಮ ಮಗಳು ಕ್ರಿಸನ್ನ್ಗೆ ಹಾಲಿವುಡ್ ವೆಬ್ ಸರಣಿಯಲ್ಲಿ ಪಾತ್ರವನ್ನು ಒದಗಿಸುವ ನೆಪದಲ್ಲಿ ವಂಚಿಸಲಾಗಿದೆ ಎಂಬ ದೂರಿನೊಂದಿಗೆ ಕ್ರೈಂ ಬ್ರಾಂಚ್ ಅನ್ನು ಸಂಪರ್ಕಿಸಿದ್ದು, ಈ ಘಟನೆ ಬೆಳಕಿಗೆ ಬಂದಿದೆ
ದೂರಿನ ಪ್ರಕಾರ, ಆರೋಪಿ ಬೋಭಾಟೆ ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವಿನ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವ ವೆಬ್ ಸರಣಿಯ ಹಣಕಾಸುದಾರರಂತೆ ತನ್ನನ್ನು ಪರಿಚಯಿಸಿಕೊಂಡಿದ್ದಾನೆ. ಹಿಂದಿ ವೆಬ್ ಶೋಗಳು, ಚಲನಚಿತ್ರಗಳು ಮತ್ತು ನಾಟಕಗಳಲ್ಲಿ ಕೆಲಸ ಮಾಡಿದ ಕ್ರಿಸನ್ನ್ ಅವರಿಗೆ ಹಾಲಿವುಡ್ನಲ್ಲಿ ಪಾತ್ರವನ್ನು ಕೊಡಿಸುತ್ತೇನೆಂದು ಭರವಸೆ ನೀಡಿದ್ದಾರೆ.
ಈ ಹಿನ್ನೆಲೆ, ನಟಿ ದುಬೈಗೆ ಹೋಗಬೇಕಿತ್ತು. ಅವರ ವಿಮಾನ ಟಿಕೆಟ್‌ಗಳನ್ನು ಏಪ್ರಿಲ್ 1ಕ್ಕೆ ಮುಂಬೈನಿಂದ ಶಾರ್ಜಾಕ್ಕೆ ಕಾಯ್ದಿರಿಸಲಾಗಿತ್ತು ಮತ್ತು ಅವರು ಏಪ್ರಿಲ್ 3ರಂದು ಹಿಂತಿರುಗಬೇಕಿತ್ತು. ಅದೇ ಸಮಯದಲ್ಲಿ, ತಾಯಿ ಪ್ರಮೀಳಾ ಪರೇರಾ ಎರಡನೇ ಆರೋಪಿ ಆಂಥೋನಿ ಪೌಲ್ ಜೊತೆ ಆಸ್ತಿ ಒಪ್ಪಂದವನ್ನು ಅಂತಿಮಗೊಳಿಸಲು ಹೈದರಾಬಾದ್‌ಗೆ ಹೋದರು. ಹೈದರಾಬಾದ್‌ನಲ್ಲಿರುವಾಗ ತಾಯಿ ಪ್ರಮೀಳಾ ಪರೇರಾ ಅವರಿಗೆ ಒಂದು ಕರೆ ಬಂದಿದೆ. ಪುತ್ರಿ ಕ್ರಿಸನ್ನ್ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಅಫೀಮು ಮತ್ತು ಗಾಂಜಾದೊಂದಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಕರೆಯಲ್ಲಿ ತಿಳಿಸಲಾಗಿತ್ತು ಎಂದು ಈ ಪ್ರಕರಣದ ಅಧಿಕಾರಿ ತಿಳಿಸಿದ್ದಾರೆ.