'ಓ ಮನಸೇ' ಶೀರ್ಷಿಕೆಯಿಂದಲೇ ಚಂದನವನದಲ್ಲಿ ಸದ್ದು ಮಾಡುತ್ತಿರುವ ಚಿತ್ರ. ನಟ ವಿಜಯ್ ರಾಘವೇಂದ್ರ ಹಾಗು ನಟ ಧರ್ಮ ಕೀರ್ತಿರಾಜ್ ಮುಖ್ಯಭೂಮಿಕೆಯಲ್ಲಿರುವ ಓ ಮನಸೇ ಚಿತ್ರದ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ಓ ಮನಸೇ ಚಿತ್ರದ ಹಾಡುಗಳು ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿವೆ. ಇತ್ತೀಚೆಗೆ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ ಹರೀಶ್, ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ, ನಟಿ ಶಾನ್ವಿ ಶ್ರೀವಾತ್ಸವ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಅಣಜಿ ನಾಗರಾಜ್, ಪುಟ್ಟಣ್ಣ ಸಮ್ಮುಖದಲ್ಲಿ ಈ ಚಿತ್ರದ ಹಾಡುಗಳನ್ನು ಅನಾವರಣ ಮಾಡಲಾಗಿದೆ.
ಪೊಲೀಸ್ ಪಾತ್ರದಲ್ಲಿ ವಿಜಯ ರಾಘವೇಂದ್ರ: ಮೊದಲು ಮಾತನಾಡಿದ ನಟ ವಿಜಯ ರಾಘವೇಂದ್ರ, ಸಿನಿಮಾ ಪ್ರಮೋಷನ್‌ನಲ್ಲಿ ಆಡಿಯೋ ಬಿಡುಗಡೆ ಎಂಬುದು ಮುಖ್ಯವಾದ ಹಂತ. ಸಿನಿಮಾ ಮಾಡೋದು ಮಾತ್ರ ಮುಖ್ಯವಲ್ಲ, ಜನರಿಗೆ ಅದನ್ನು ತಲುಪಿಸುವುದು ಬಹಳ ಮುಖ್ಯ. ನಿರ್ಮಾಪಕರು ಒಳ್ಳೆ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ನಾನು ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರದಲ್ಲಿ ಕಾಮಿಡಿ, ಆ್ಯಕ್ಷನ್, ಲವ್ ಹೀಗೆ ಎಲ್ಲಾ ಅಂಶಗಳಿವೆ. ಇದು ನನಗೆ ಬಹಳ ಸ್ಪೆಷಲ್ ಸಿನಿಮಾ ಎನ್ನಬಹುದು ಎಂದು ತಿಳಿಸಿದರು.
ತ್ರಿಕೋನ ಪ್ರೇಮ ಕಥೆ: ಕೋವಿಡ್ ಸಮಯದಲ್ಲಿ ನನಗೆ ಈ ಸಿನಿಮಾ ಸಿಕ್ಕಿದ್ದು, ಕಮ್ ಬ್ಯಾಕ್ ಜರ್ನಿ ಎನ್ನಬಹುದು. ನಾನು ಈ ಚಿತ್ರದಲ್ಲಿ ಲವರ್ ಬಾಯ್ ಹಾಗೂ ನೆಗಟಿವ್ ಸೈಡ್ ಪಾತ್ರ ಮಾಡಿದ್ದೇನೆ ಎಂದು ನಾಯಕ ಧರ್ಮ ಕೀರ್ತಿರಾಜ್ ತಿಳಿಸಿದರು. ಇನ್ನು, ಇದು ತ್ರಿಕೋನ ಪ್ರೇಮ ಕಥೆ ಒಳಗೊಂಡ ಸಿನಿಮಾ. ಈ ಚಿತ್ರದಲ್ಲಿ ನಟಿಸಿರುವ ಖುಷಿಯಿದೆ ಎಂದರು ನಾಯಕಿ ಸಂಚಿತಾ ಪಡುಕೋಣೆ.
ನೈಜಘಟನೆ ಆಧಾರಿತ ಸಿನಿಮಾ: ಈ ಹಿಂದೆ 'ನವರಂಗಿ' ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದ ಉಮೇಶ್ ಗೌಡ ಈಗ ಮೂರನೇ ಪ್ರಯತ್ನವಾಗಿ 'ಓ ಮನಸೇ' ನಿರ್ದೇಶನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಚಿತ್ರದ ಟ್ರೈಲರ್ಗೆ ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದ್ದು, ಈಗ ಹಾಡುಗಳಿಗೂ ಒಳ್ಳೆ ರೆಸ್ಪಾನ್ಸ್ ಬರುತ್ತಿದೆ. ಇದೊಂದು ನೈಜ ಘಟನೆ ಆಧಾರಿತ ಸಿನಿಮಾ ಎಂಬುದು ವಿಶೇಷ ಎಂದು ಹೇಳಿದರು.