ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಸಖತ್ ಸುದ್ದಿ ಮಾಡುತ್ತಿರುವ ಹಾಗೂ ನವರಸನಾಯಕ ಜಗ್ಗೇಶ್ ಅಭಿನಯದ ಹಾಗೂ ನೀರ್ದೋಸೆ ಸಿನಿಮಾ ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ ತೋತಾಪುರಿ ಬಿಡುಗಡೆಗೆ ಸಿದ್ಧಗೊಂಡಿದೆ. ಆರಂಭದಿಂದಲೂ ಇಲ್ಲಿಯವರೆಗೆ ಒಂದಲ್ಲ ಒಂದು ವಿಚಾರಕ್ಕೆ ಈ ಚಿತ್ರ ಸದ್ದು ಮಾಡುತ್ತಲೇ ಇದೆ. ಸದ್ಯ ಟ್ರೈಲರ್ನಿಂದಲೇ ಸಖತ್ ಸದ್ದು ಮಾಡುತ್ತಿರುವ ಚಿತ್ರ ಇದೀಗ ಬಿಡುಗಡೆಗೆ ತುದಿಗಾಲಮೇಲೆ ನಿಂತಿದೆ. ಕಾರ್ಯಕ್ರಮವೊಂದಲ್ಲಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಇಂದು ಘೋಷಿಸಲಾಯಿತು.
ಈ ಬಗ್ಗೆ ಮಾತನಾಡುವುದಕ್ಕೆ ನಟರಾದ ಜಗ್ಗೇಶ್, ಧನಂಜಯ್, ನಟಿಯರಾದ ಅದಿತಿ ಪ್ರಭುದೇವ, ಸುಮನ್ ರಂಗನಾಥ್, ವೀಣಾ ಸುಂದರಮ್, ಹೇಮದತ್ ನಿರ್ದೇಶಕ ವಿಜಯ ಪ್ರಸಾದ್, ನಿರ್ಮಾಪಕ ಕೆ ಸುರೇಶ್ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತಿ ಇತ್ತು. ಸದ್ಯಕ್ಕೆ ಹಾಡುಗಳು ಮತ್ತು ಟ್ರೈಲರ್ನಿಂದಲೇ ಗಮನ ಸೆಳೆಯುತ್ತಿರುವ ತೋತಾಪುರಿ ಸಿನಿಮಾ ಸೆಪ್ಟೆಂಬರ್ 30ಕ್ಕೆ ವಿಶ್ವದಾದ್ಯಂತ ತೆರೆ ಕಾಣುತ್ತಿದೆ.
ಚಿತ್ರದಲ್ಲಿ ಶಕೀಲಾ ಬಾನು ಪಾತ್ರ ಮಾಡುತ್ತಿರುವ ಅದಿತಿ ಪ್ರಭುದೇವ ಮಾತನಾಡಿ, ಟ್ರೈಲರ್ ನೋಡಿದವರು ಹೆಚ್ಚಾಗಿ ಚೇಷ್ಟೇ ಇದೆ ಅಂತಾರೆ. ಆದರೆ, ತೋತಾಪುರಿ ಸಿನಿಮಾದ ಕಥೆನೇ ಬೇರೆ ಇದೆ. ಜೀವನದ ಮೌಲ್ಯಗಳನ್ನು ಒಳಗೊಂಡಿರುವ ಚಿತ್ರ ಇದಾಗಿದೆ ಅಂದರು.
ನಿರ್ದೇಶಕ ವಿಜಯ ಪ್ರಸಾದ್ ಜೊತೆ ಸಿದ್ಲಿಂಗು, ನೀರ್ದೋಸೆ, ಪೆಟ್ರೋಮ್ಯಾಕ್ಸ್ ಸಿನಿಮಾಗಳನ್ನು ಮಾಡಿರುವ ಖಾಯಂ ನಟಿ ಅಂದ್ರೆ ಅದು ಬಹುಭಾಷೆ ನಟಿ ಸುಮನಾ ರಂಗನಾಥ್. ಈ ಚಿತ್ರದಲ್ಲಿ ಸಿಸ್ಟರ್ ವಿಕ್ಟೋರಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.