ಆಸ್ಕರ್ ವಿಚಾರವಾಗಿ ಭಾರತದ ಸಾಧನೆ ಅಭೂತಪೂರ್ವ. ಇತ್ತೀಚೆಗಷ್ಟೇ ನಡೆದ 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ಮತ್ತು ಗುನೀತ್ ಮೊಂಗಾ ನಿರ್ಮಾಣದ "ದಿ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಅವಾರ್ಡ್ ಪಡೆದುಕೊಂಡಿತ್ತು. ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪಡೆದ ಭಾರತದ ಮೊದಲ ಸಾಕ್ಷ್ಯಚಿತ್ರ ಇದು ಎಂಬ ಖ್ಯಾತಿಗೂ ಪಾತ್ರವಾಗಿದೆ "ದಿ ಎಲಿಫೆಂಟ್ ವಿಸ್ಪರರ್ಸ್".
ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು: ಇದಲ್ಲದೇ ಭಾರತದ ಸೂಪರ್ ಹಿಟ್ ಸಿನಿಮಾ 'ಆರ್ಆರ್ಆರ್'ನ ನಾಟು ನಾಟು ಹಾಡು ಕೂಡ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇದೀಗ "ದಿ ಎಲಿಫೆಂಟ್ ವಿಸ್ಪರರ್ಸ್" ತಂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದೆ.
ಪ್ರಧಾನಿ ಭೇಟಿಯಾದ "ದಿ ಎಲಿಫೆಂಟ್ ವಿಸ್ಪರರ್ಸ್" ತಂಡ:ಇಂದು "ದಿ ಎಲಿಫೆಂಟ್ ವಿಸ್ಪರರ್ಸ್" ನಿರ್ಮಾಪಕಿ ಗುನೀತ್ ಮೊಂಗಾ ಮತ್ತು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಅವರ ಭೇಟಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುತ್ತಿವೆ.
ಪ್ರಧಾನಿ ಮೋದಿ ಟ್ವೀಟ್: ದಿ ಎಲಿಫೆಂಟ್ ವಿಸ್ಪರರ್ಸ್ ಸಿನಿಮಾದ ತೇಜಸ್ಸು ಮತ್ತು ಯಶಸ್ಸು ಜಾಗತಿಕವಾಗಿ ಗಮನ ಸೆಳೆಯುವುದರ ಜೊತೆಗೆ ಮೆಚ್ಚುಗೆಯನ್ನೂ ಗಳಿಸಿದೆ. ಇಂದು, ಆ ಅದ್ಭುತ ತಂಡವನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಅವರು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.