ಕಾಲಿವುಡ್ ಸೂಪರ್ಸ್ಟಾರ್ ದಳಪತಿ ವಿಜಯ್ ನಟನೆಯ ಮುಂಬರುವ ಚಿತ್ರ 'ಲಿಯೋ'. ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಇದೇ ಅಕ್ಟೋಬರ್ 19ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರೀಮಿಯರ್ ಶೋಗೆ ತಮಿಳುನಾಡು ಸರ್ಕಾರ ಆರಂಭದಲ್ಲಿ ಅನುಮತಿ ನಿರಾಕರಿಸಿತ್ತು. ಇದರಿಂದ ವಿಜಯ್ ಅಭಿಮಾನಿಗಳು ತೀವ್ರ ಅಸಮಾಧಾನಗೊಂಡಿದ್ದರು. ಆದರೆ ಇದೀಗ ಸ್ಟಾಲಿನ್ ಸರ್ಕಾರ 'ಲಿಯೋ' ಪ್ರಥಮ ಪ್ರದರ್ಶನಕ್ಕೆ ಒಪ್ಪಿಗೆ ಕೊಟ್ಟಿದೆ.
ಈ ಮೊದಲು ತಮಿಳುನಾಡು ಸರ್ಕಾರ 'ಲಿಯೋ' ಸಿನಿಮಾದ ಪ್ರೀಮಿಯರ್ಗೆ ಅನುಮತಿ ನೀಡುವುದಿಲ್ಲವೆಂದೇ ಹೇಳಿತ್ತು. ಈ ನಿರ್ಧಾರದ ವಿರುದ್ಧ ದಳಪತಿ ವಿಜಯ್ ಅಭಿಮಾನಿಗಳು ಬೇಸರ ಹೊರಹಾಕಿದ್ದರು. ಆದರೆ ಇದೀಗ ಏಕಾಏಕಿ ಸರ್ಕಾರ ತನ್ನ ನಿರ್ಧಾರವನ್ನು ಬದಲಾಯಿಸಿದೆ. 'ಲಿಯೋ' ಪ್ರೀಮಿಯರ್ಗೆ ಸ್ಟಾಲಿನ್ ಸರ್ಕಾರ ಅನುಮತಿ ನೀಡಿದೆ. ಇದರಿಂದ ವಿಜಯ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಸರ್ಕಾರದ ಆದೇಶದಂತೆ, 'ಲಿಯೋ' ಚಿತ್ರ ಬಿಡುಗಡೆ ದಿನ ತಮಿಳುನಾಡಿನಲ್ಲಿ ಬೆಳಗ್ಗೆ 7 ಗಂಟೆಗೆ ಪ್ರೀಮಿಯರ್ ಶೋ ಆರಂಭವಾಗಲಿದೆ. ಅಕ್ಟೋಬರ್ 19 ರಿಂದ 24ರವರೆಗೆ ದಿನಕ್ಕೆ ಐದು ಬಾರಿ ಚಿತ್ರ ಪ್ರದರ್ಶನ ಕಾಣಲಿದೆ. ಮತ್ತೊಂದೆಡೆ 'ಲಿಯೋ' ಚಿತ್ರ ಪ್ರದರ್ಶನವು ಯುಎಸ್ನಲ್ಲಿ ಅಕ್ಟೋಬರ್ 19ರಂದು ಬೆಳಗ್ಗೆ 4 ಗಂಟೆಗೆ ಇರಲಿದೆ.
ಚಿತ್ರದ ಟ್ರೇಲರ್ ಬಿಡುಗಡೆಯಾಗುವುದಕ್ಕೂ ಮುನ್ನವೇ ಮುಂಗಡ ಬುಕ್ಕಿಂಗ್ನಲ್ಲಿ 'ಲಿಯೋ' ದಾಖಲೆ ಸೃಷ್ಟಿಸಿದೆ. ಕಳೆದ ವಾರ ಈ ಸಿನಿಮಾದ ಸಾಗರೋತ್ತರ ಬುಕ್ಕಿಂಗ್ ನೋಡಿದಾಗ 40 ಸಾವಿರಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿದೆ. ಟ್ರೇಲರ್ ನೋಡುವ ಮುನ್ನವೇ ಈ ರೇಂಜ್ನಲ್ಲಿ ಟಿಕೆಟ್ ಮಾರಾಟವಾದ ಚಿತ್ರ ಇದೇ ಮೊದಲು ಎಂದು ಯುಕೆ ಮೂಲದ ನಿರ್ಮಾಣ ಸಂಸ್ಥೆಯೊಂದು ತಿಳಿಸಿದೆ.