ಹಿಂದಿ ಚಿತ್ರರಂಗದ ಜನಪ್ರಿಯ ನಟಿ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಅವರು ತಮ್ಮ ಮುಂದಿನ ಸಿನಿಮಾಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಇಂದು ಅಂತಾರಾಷ್ಟ್ರೀಯ ತೃತೀಯಲಿಂಗಿಗಳ (ಮಂಗಳಮುಖಿಯರು) ದಿನವಾಗಿದ್ದು (international transgender day of visibility) ತಮ್ಮ ಮುಂದಿನ ವೆಬ್ ಸೀರಿಸ್ 'ತಾಲಿ'ಗೆ ಸಂಬಂಧಿಸಿದ ವಿಡಿಯೋ ಹಂಚಿಕೊಂಡಿದ್ದಾರೆ. ಈ ಮೂಲಕ ತೃತೀಯಲಿಂಗಿಗಳಿಗೆ ಸಾಮಾಜಿಕ ಸಂದೇಶವೊಂದನ್ನು ನೀಡಿದ್ದಾರೆ.
ಪ್ರತಿ ವರ್ಷ ಮಾರ್ಚ್ 31ರಂದು ಅಂತಾರಾಷ್ಟ್ರೀಯ ತೃತೀಯಲಿಂಗಿಗಳ ದಿನಾಚರಿಸಲಾಗುತ್ತದೆ. ಈ ದಿನದಂದು, ತೃತೀಯಲಿಂಗಿಗಳ ಹಕ್ಕು ಮತ್ತು ಅವರು ಎದುರಿಸುತ್ತಿರುವ ಸವಾಲು, ತಾರತಮ್ಯದ ಬಗ್ಗೆ ವಿಶ್ಯಾದ್ಯಂತ ಚರ್ಚಿಸಲಾಗುತ್ತದೆ. ಅದರಂತೆ, ಸುಶ್ಮಿತಾ ಸೇನ್ ಸಮಾಜಕ್ಕೆ ವಿಡಿಯೋ ಸಂದೇಶ ಕೊಟ್ಟಿದ್ದಾರೆ.
ತೃತೀಯಲಿಂಗಿಗಳು ಚಪ್ಪಾಳೆ ಹೊಡೆಯುವುದೇಕೆ?:ತೃತೀಯಲಿಂಗಿಗಳು ಸಾಮಾನ್ಯವಾಗಿ ಚಪ್ಪಾಳೆ ಹೊಡೆಯುತ್ತಾ ಬಂದು ತಮ್ಮ ಪರಿಚಯ ಮಾಡಿಕೊಳ್ಳುತ್ತಾರೆ. ವೆಬ್ ಸೀರಿಸ್ನ ಶೀರ್ಷಿಕೆಯೇ ಹೇಳುವಂತೆ ನಟಿ ತಾಲಿ/ಚಪ್ಪಾಳೆ ಬಗ್ಗೆ ಸುಶ್ಮಿತಾ ಮಾತನಾಡಿದ್ದಾರೆ. ಅವರಿಂದು ಶೇರ್ ಮಾಡಿರುವ ವಿಡಿಯೋದಲ್ಲಿ ತೃತೀಯಲಿಂಗಿಗಳು ಏಕೆ ಚಪ್ಪಾಳೆ ಹೊಡೆಯುತ್ತಾರೆ ಎಂಬ ಬಗ್ಗೆ ಮಾತನಾಡಿದ್ದಾರೆ. ಮುಂಬೈ ಮೂಲದ ತೃತೀಯಲಿಂಗಿ ಕಾರ್ಯಕರ್ತೆ ಶ್ರೀಗೌರಿ ಸಾವಂತ್ ಅವರೊಂದಿಗೆ ಮಾಜಿ ವಿಶ್ವಸುಂದರಿ ಕಾಣಿಸಿಕೊಂಡಿದ್ದಾರೆ.
ಚಪ್ಪಾಳೆ ತಟ್ಟುತ್ತಾ ವಿಡಿಯೋ ಆರಂಭವಾಗಿದ್ದು, ಏಕೆ ಚಪ್ಪಾಳೆ ಹೊಡೆಯುತ್ತಾರೆ? ನಿಮ್ಮಿಂದ ಹಣ ಕೇಳಲು? ನಿಮ್ಮ ಗಮನ ಸೆಳೆಯಲು? ನಿಮ್ಮ ಕೋಪ ಹೊರಹಾಕಲು? ಚಪ್ಪಾಳೆ ತಟ್ಟುವುದು ಕೇವಲ ಇದಕ್ಕೇನಾ ಎಂದು ತೃತೀಯಲಿಂಗಿ ಕಾರ್ಯಕರ್ತೆ ಶ್ರೀಗೌರಿ ಸಾವಂತ್ ಮತ್ತು ಸುಶ್ಮಿತಾ ಸೇನ್ ಚರ್ಚಿಸುತ್ತಾರೆ.