ಬಾಲಿವುಡ್ನ ಈ ವರ್ಷದ ಸೂಪರ್ಹಿಟ್ ಸಿನಿಮಾಗಳ ಸಾಲಿನಲ್ಲಿ ಪಠಾಣ್, ಗದರ್ 2 ಹಾಗೂ ಜವಾನ್ ಪ್ರಮುಖವಾಗಿವೆ. ಕಲೆಕ್ಷನ್ ವಿಚಾರದಲ್ಲಿ ಗದರ್ 2 ಮತ್ತು ಜವಾನ್ ಸಿನಿಮಾಗಳನ್ನು ಪಠಾಣ್ ಹಿಂದಿಕ್ಕಿದೆ. ಅದರಲ್ಲೂ ಜವಾನ್ ಮತ್ತು ಗದರ್ 2 ಮಧ್ಯೆ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರಗಳಾಗಲು ಪೈಪೋಟಿ ನಡೆಯುತ್ತಿದೆ. ಇತ್ತೀಚೆಗಿನ ವರದಿ ಪ್ರಕಾರ, ಸನ್ನಿ ಡಿಯೋಲ್ ಅವರ ಗದರ್ 2 ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ.
ಟ್ರೇಡ್ ವಿಶ್ಲೇಷಕ ತರುಣ್ ಆದರ್ಶ್ ಅವರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅವರ ಗದರ್ 2 ಬಾಕ್ಸ್ ಆಫೀಸ್ನಲ್ಲಿ ಗಳಿಸಿದ ಒಟ್ಟು ಮೊತ್ತವನ್ನು ಬಹಿರಂಗಪಡಿಸಿದ್ದಾರೆ. ಭಾರತದಲ್ಲಿ (ಹಿಂದಿ ಆವೃತ್ತಿ) 524.75 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗದರ್ 2 ಅತಿ ಹೆಚ್ಚು ಗಳಿಸಿದ ಹಿಂದಿ ಚಲನಚಿತ್ರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ಅತಿ ಹೆಚ್ಚು ಗಳಿಕೆ ಕಂಡ ಹಿಂದಿ ಚಿತ್ರವಾಗಿತ್ತು. ಆದರೆ ಸೆಪ್ಟೆಂಬರ್ 7 ರಂದು ಬಿಡುಗಡೆಯಾದ ಎಸ್ಆರ್ಕೆ ಅವರ ಜವಾನ್ ಮತ್ತು ಆಗಸ್ಟ್ 11 ರಂದು ತೆರೆ ಕಂಡ ಗದರ್ 2 ಸಿನಿಮಾಗಳು ಪಠಾಣ್ ಅನ್ನು ಸಿಂಹಾಸನದಿಂದ ಕೆಳಗಿಳಿಸಲು ಥಿಯೇಟರ್ಗಳಲ್ಲಿ ವೇಗದ ಓಟ ಮುಂದುವರೆಸಿತ್ತು. ಅದರಂತೆ ಗದರ್ 2 ಅಧಿಕೃತವಾಗಿ ಪಠಾಣ್ಗಿಂತ ಒಂದು ಹೆಜ್ಜೆ ಮುಂದೆ ಇರಿಸಿದ್ದು, ಅನೇಕ ದಾಖಲೆಗಳೊಂದಿಗೆ ಅತಿ ಹೆಚ್ಚು ಗಳಿಕೆ ಕಂಡ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ.
ಈ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡ ತರುಣ್ ಆದರ್ಶ್, "'ಗದರ್ 2' ಭಾರತದಲ್ಲಿ 'ಪಠಾಣ್'ನ ಹಿಂದಿ ಆವೃತ್ತಿಯ (524.53 ಕೋಟಿ ರೂ.) ಕಲೆಕ್ಷನ್ ಅನ್ನು ಮೀರಿಸಿದೆ. ಈಗ ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಚಲನಚಿತ್ರವಾಗಿದೆ. ಗದರ್ 2 ಬಾಕ್ಸ್ ಆಫೀಸ್ ಕಲೆಕ್ಷನ್ಗಳು.. ಒಂದನೇ ವಾರ: 284.63 ಕೋಟಿ ರೂಪಾಯಿ, ಎರಡನೇ ವಾರ: 134.47 ಕೋಟಿ ರೂಪಾಯಿ, ಮೂರನೇ ವಾರ: 63.35 ಕೋಟಿ ರೂಪಾಯಿ, ನಾಲ್ಕನೇ ವಾರ: 27.55 ಕೋಟಿ ರೂಪಾಯಿ, ಐದನೇ ವಾರ: 7.28 ಕೋಟಿ ರೂಪಾಯಿ, ಆರನೇ ವಾರ: 4.72 ಕೋಟಿ ರೂಪಾಯಿ, ಏಳನೇ ವಾರ: 2.75 ಕೋಟಿ ರೂಪಾಯಿ (ಬುಧವಾರದವರೆಗೆ). ಭಾರತದಲ್ಲಿ ಒಟ್ಟು ಕಲೆಕ್ಷನ್: 524.75 ಕೋಟಿ ರೂಪಾಯಿ" ಎಂದು ಬರೆದುಕೊಂಡಿರುವ ಅವರು ಗದರ್ 2 ಕಲೆಕ್ಷನ್ ಬಗ್ಗೆ ಕಂಪ್ಲೀಟ್ ಮಾಹಿತಿ ನೀಡಿದ್ದಾರೆ.
ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ ಪ್ರಕಾರ, ಶಾರುಖ್ ಖಾನ್ ಅವರ 'ಜವಾನ್' ಸಿನಿಮಾ ಭಾರತದಲ್ಲಿ 600 ಕೋಟಿ ರೂಪಾಯಿಗಳ ಗಡಿಯನ್ನು ಸಮೀಪಿಸುತ್ತಿದೆ. ಚಿತ್ರವು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಯಿತು. ಈ ಮೂರು ಭಾಷೆಗಳಲ್ಲಿ ಸಿನಿಮಾ ಒಟ್ಟು 579.93 ಕೋಟಿ ರೂಪಾಯಿ ಗಳಿಸಿದೆ.
'ಗದರ್ 2' 2001ರ ಗದರ್ ಚಿತ್ರದ ಮುಂದುವರಿದ ಭಾಗ. ಸನ್ನಿ ಡಿಯೋಲ್ ಮೊದಲ ಚಿತ್ರದಲ್ಲಿ ತಾರಾ ಸಿಂಗ್ ಎಂಬ ಟ್ರಕ್ ಡ್ರೈವರ್ ಪಾತ್ರ ನಿರ್ವಹಿಸಿದ್ದರೆ, ಅಮೀಶಾ ಪಟೇಲ್ ಸಕೀನಾ ಪಾತ್ರದಲ್ಲಿ ನಟಿಸಿದ್ದರು. ಗದರ್ 2 ಚಿತ್ರವನ್ನು ಝೀ ಸ್ಟುಡಿಯೋಸ್ ನಿರ್ಮಿಸಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹಿಟ್ ಬ್ಲಾಕ್‌ಬಸ್ಟರ್‌ಗಳಲ್ಲಿ ಈ ಸಿನಿಮಾವು ಒಂದಾಗಿದೆ. ಸನ್ನಿ ಮತ್ತು ಅಮೀಶಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಮೋಹಕವಾಗಿ ಕಂಡುಬಂದರೆ, ತಾರಾ ಸಿಂಗ್ ಸಾಹಸ ದೃಶ್ಯಗಳು ಪ್ರೇಕ್ಷಕರನ್ನು ಶಿಳ್ಳೆ ಹೊಡೆಯುವಂತೆ ಪ್ರೇರೇಪಿಸಿತ್ತು.
ಇದನ್ನೂ ಓದಿ:'ಬಾಹುಬಲಿ 2' ದಾಖಲೆ ಮುರಿದ 'ಗದರ್ 2': ಸನ್ನಿ ಡಿಯೋಲ್ ಸಿನಿಮಾಗೆ ಮತ್ತೊಂದು ಗರಿ